ಮೈಸೂರು

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯ

ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ, ಉದ್ಯೋಗ ಭದ್ರತೆ, ಸೇವಾಧಾರಿತ ವೇತನ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಎ.ಐ.ಟಿ.ಯು.ಸಿ ಯ ಅಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ ಒತ್ತಾಯಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಳೆದ 6 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತರನ್ನು ಸಂಪೂರ್ಣ ನಿರ್ಲಕ್ಷ್ಯಿಸಿದೆ. ಅಲ್ಲದೇ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿಯೂ ಅನುದಾನವನ್ನು ಕಡಿತಗೊಳಿಸಿರುವುದು ಖಂಡನೀಯ. ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಬೇಡಿಕೆಯನ್ನು ಈಡೇರಿಸುವಂತೆ ಹಲವಾರು ಹೋರಾಟಗಳನ್ನು ಮಾಡಿದ್ದೇವೆ. ಸಿ.ಎಂ.ಸಿದ್ದರಾಮಯ್ಯನವರು ನೀಡಿರುವ ಭರವಸೆಯಂತೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದು, ಉದ್ಯೋಗ ಭದ್ರತೆ, ಕನಿಷ್ಠ ವೇತನಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ.   ಕಳೆದ ಐದು ತಿಂಗಳಿಂದ ಹಲವಾರು  ಹೋರಾಟಗಳನ್ನು ಮಾಡಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ 2017-18 ರ ಬಜೆಟ್ ನಲ್ಲಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದ್ದೇವೆ. ಇಂದಿಗೂ ಕೇಂದ್ರ ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಖಂಡನೀಯ ಎಂದರು.

ಸಿ.ಎಂ. ಸಿದ್ದರಾಮಯ್ಯನವರು ಸಂಧಾನ ನಡೆಸಿ ಬೇಡಿಕೆಗಳನ್ನು ಈಡೇರಿಸುವಂತೆ ಭರವಸೆ ನೀಡಿದ ಮೇಲೆ ಬೆಂಗಳೂರಿನಲ್ಲಿ ಹೋರಾಟ ನಿಲ್ಲಿಸಿದೆವು. ಇದೇ ಏಪ್ರಿಲ್ 10 ರಂದು ಸಭೆ ಕರೆದು ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದಲ್ಲಿ ‘ಜೈಲ್ ಭರೋ’ ಚಳುವಳಿ ಹಾಗೂ ‘ಪಡಿ ಇಲ್ಲದೇ ಮಡಿ’ ಎಂಬ ಚಳುವಳಿ ಕೈಗೊಳ್ಳುತ್ತೇವೆ ಎಂದರು.

ಶೌಚಾಲಯಗಳೇ ಇಲ್ಲ : ರಾಜ್ಯದಲ್ಲಿ 1, 35,153 ಅಂಗನವಾಡಿ ಸಹಾಯಕಿಯರು ಹಾಗೂ ಕಾರ್ಯಕರ್ತರು ಕರ್ತವ್ಯ ನಿರ್ವಹಿಸುತ್ತಿದ್ದು, ಕೇವಲ 3,333 ಕೇಂದ್ರಗಳಲ್ಲಿ ಶೌಚಾಲಯ ವ್ಯವಸ್ಥೆ ಇದೆ. ಇನ್ನುಳಿದ ಕೇಂದ್ರಗಳಲ್ಲಿ ಮಹಿಳೆಯರು, ಗರ್ಭಿಣಿಯರ ಪಾಡು ಹೇಳಲಾಗದು ಆದರೂ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ ಎಂದು ಅಂಗನವಾಡಿ ಕೇಂದ್ರಗಳ ಅವ್ಯವಸ್ಥೆಯನ್ನು ದೂರಿದರು.

ಸುದ್ದಿಗೋಷ್ಠಿಯಲ್ಲಿ  ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ, ಕಾರ್ಯದರ್ಶಿ ಎನ್.ಶಿವಣ್ಣ, ಖಜಾಂಚಿ ಶಾರದಮ್ಮ , ರಾಜ್ಯ ಸಂಚಾಲಕ ಜಗನಾಥ್ ಮತ್ತಿತರರು ಹಾಜರಿದ್ದರು. (ಕೆ.ಎಂ.ಆರ್-ಎಸ್.ಎಚ್)

Leave a Reply

comments

Related Articles

error: