ದೇಶಪ್ರಮುಖ ಸುದ್ದಿ

ಲಂಡನ್ ನಲ್ಲಿ ರಹಸ್ಯ ವಿಚಾರಣೆಯಿಂದಾಗಿ ವಿಜಯ್ ಮಲ್ಯ ಹಸ್ತಾಂತರ ಪ್ರಕ್ರಿಯೆ ವಿಳಂಬ: ಸುಪ್ರೀಂಗೆ ಕೇಂದ್ರದ ಮಾಹಿತಿ

ನವದೆಹಲಿ,ಅ.5-ಮದ್ಯದ ದೊರೆ ವಿಜಯ್ ಮಲ್ಯ ಹಸ್ತಾಂತರ ಪ್ರಕ್ರಿಯೆ ಕುರಿತು ಲಂಡನ್ ನಲ್ಲಿ ರಹಸ್ಯ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಹಸ್ತಾಂತರ ಕಾರ್ಯ ಇನ್ನಷ್ಟು ವಿಳಂಬ ಆಗಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ತಿಳಿಸಿದೆ.

ಭಾರತಕ್ಕೆ ಪಂಗನಾಮ ಹಾಕಿ ಲಂಡನ್​ನಲ್ಲಿ ಅಡಗಿ ಕುಳಿತಿರುವ ವಿಜಯ ಮಲ್ಯರನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಕೋರಿ ಕೇಂದ್ರ ಸರ್ಕಾರ ಮನವಿ ಸಲ್ಲಿಸಿತ್ತು. ಇದಕ್ಕೆ ತಡೆ ನೀಡುವಂತೆ ಲಂಡನ್​ ಕೋರ್ಟ್​ಗೆ ಮಲ್ಯ ಹೋಗಿದ್ದರು. ಆದರೆ ಅಲ್ಲಿಯ ಕೋರ್ಟ್​ ಅವರ ಮನವಿಯನ್ನು ತಿರಸ್ಕರಿಸಿತ್ತು.

ಈ ಹಿನ್ನೆಲೆಯಲ್ಲಿ ಹಸ್ತಾಂತರ ಪ್ರಕ್ರಿಯೆಗಳು ಪೂರ್ಣಗೊಂಡಿದ್ದರೂ, ಇದೀಗ ಹೊಸ ಕ್ರಮಗಳು ಪ್ರಾರಂಭವಾಗಿವೆ. ಇದರ ನಿಖರ ಸ್ವರೂಪವು ಭಾರತ ಸರ್ಕಾರಕ್ಕೆ ತಿಳಿದಿಲ್ಲ ಎಂದು ಸರ್ಕಾರ ಸುಪ್ರೀಂಕೋರ್ಟ್​ಗೆ ಹೇಳಿದೆ.

‘ಹಸ್ತಾಂತರ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಮತ್ತೊಂದು ರಹಸ್ಯ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ನಮಗೆ ಅದರ ಯಾವುದೇ ಸೂಚನೆಗಳು ಇಲ್ಲ. ಆದ್ದರಿಂದ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಲಿದೆ ಎಂದು ಕೇಂದ್ರ ಸರ್ಕಾರದ ಪರ ವಕೀಲ ರಜತ್ ನಾಯರ್ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿದರು.

ಈ ಹೊಸ ಪ್ರಕ್ರಿಯೆ ಏನು ಎಂಬುದಾಗಿ ನ್ಯಾಯಾಲಯವು ಮಲ್ಯ ಅವರ ವಕೀಲ ಅಂಕುರ್ ಸೈಗಲ್ ಅವರನ್ನು ಪ್ರಶ್ನಿಸಿದರು. ಅದಕ್ಕೆ ಅವರು ತಮಗೆ ಇದರ ಬಗ್ಗೆ ತಿಳಿದಿಲ್ಲ ಎಂದರು. ಇದಕ್ಕೆ ಸಿಟ್ಟುಗೊಂಡ ನ್ಯಾಯಮೂರ್ತಿಗಳು, ನಿಮ್ಮ ಕಕ್ಷಿದಾರರ ಬಗ್ಗೆ ಗೊತ್ತಿಲ್ಲ ಎಂದರೆ ಹೇಗೆ? ಅವರು ನಿಮಗೆ ಸೂಚನೆಗಳನ್ನು ನೀಡುವುದಿಲ್ಲವೆ? ಅವರ ಪ್ರತಿಯೊಂದು ಮಾಹಿತಿಯೂ ನಿಮಗೆ ಗೊತ್ತಿರಬೇಕಲ್ಲ, ಹೀಗೆ ಗೊತ್ತಿಲ್ಲ ಎಂದು ಹೇಗೆ ಹೇಳುತ್ತೀರಿ ಎಂದು ಪ್ರಶ್ನಿಸಿದರು.

ಇನ್ನು, ಇಂಗ್ಲೆಂಡ್‌ನಲ್ಲಿ ಪ್ರಾರಂಭವಾಗಿರುವ ಹೊಸ ವಿಚಾರಣೆಯ ಸ್ವರೂಪ, ಆ ವಿಚಾರಣೆ ಯಾವಾಗ ಮುಕ್ತಾಯಗೊಳ್ಳುತ್ತದೆ ಹಾಗೂ ಮಲ್ಯ ಯಾವಾಗ ಸುಪ್ರೀಂ ಕೋರ್ಟ್ ಮುಂದೆ ಹಾಜರಾಗುತ್ತಾರೆ ಎಂಬುದರ ಬಗ್ಗೆ ನವೆಂಬರ್ 2ರಂದು ಸ್ಪಷ್ಟ ಪ್ರತಿಕ್ರಿಯೆ ನೀಡುವಂತೆ ಮಲ್ಯ ಪರ ವಕೀಲರಿಗೆ ಸುಪ್ರೀಂ ಸೂಚಿಸಿದೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: