ಪ್ರಮುಖ ಸುದ್ದಿಮೈಸೂರು

ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ಕೋವಿಡ್ -19 ನಂತರದ ಪುನರ್ವಸತಿ ಕೇಂದ್ರದ ಆರಂಭ ಸ್ವಾಗತಾರ್ಹ : ಡಾ. ಕೆ. ಸುಧಾಕರ್

ಮೈಸೂರು,ಅ.6:- ಕೋವಿಡ್-19 ನಂತರದ ಪುನರ್ವಸತಿ ಕೇಂದ್ರದ ಆರಂಭ ಸ್ವಾಗತಾರ್ಹ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ಹೇಳಿದರು.
ಅವರು ನಿನ್ನೆ ಮೈಸೂರು ಜೆಎಸ್ಎಸ್ ಆಸ್ಪತ್ರೆಯಲ್ಲಿ ಕೋವಿಡ್-19 ನಂತರದ ಪುನರ್ವಸತಿ ಕೇಂದ್ರವನ್ನು ಉದ್ಘಾಟಿಸಿದರು. ಕೋವಿಡ್ ಕಾರಣದಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳಲ್ಲಿ ಇನ್ನೂ ಅನೇಕ ಇತರ ದೈಹಿಕ ಸಮಸ್ಯೆಗಳಿರುತ್ತವೆ. ಕೋವಿಡ್ ನಂತರದ ಚಿಕಿತ್ಸೆ ಅತ್ಯಂತ ಅಗತ್ಯ. ಈ ಖಾಯಿಲೆಗೆ ತುತ್ತಾದವರು ಅನೇಕ ರೀತಿಯಲ್ಲಿ ಮಾನಸಿಕ ಒತ್ತಡಗಳಿಗೆ ಒಳಗಾಗುತ್ತಾರೆ. ಅವರಿಗೆ ಸೂಕ್ತ ರೀತಿಯಲ್ಲಿ ಮಾನಸಿಕ ಸ್ಥೈರ್ಯ ತುಂಬುವುದು ಅಗತ್ಯ. ಇಂಥ ಪುನಶ್ಚೇತನ ಕೇಂದ್ರವನ್ನು ಸರ್ಕಾರದಿಂದಲೂ ನಾವು ಇನ್ನೂ ಸ್ಥಾಪಿಸಲು ಸಾಧ್ಯವಾಗಿಲ್ಲ. ನಾನು ನೋಡಿರುವ ಆಸ್ಪತ್ರೆಗಳಲ್ಲಿ ಜೆಎಸ್ಎಸ್ ಆಸ್ಪತ್ರೆ ಅತ್ಯಂತ ಸುಸಜ್ಜಿತ, ವ್ಯವಸ್ಥಿತವಾದ ಆಸ್ಪತ್ರೆಯಾಗಿದೆ.
ವೈದ್ಯರೆಲ್ಲರೂ ಯಾವುದೇ ವಿಶ್ರಾಂತಿಯ ರಜೆಯನ್ನು ಪಡೆಯದೆ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಮುಂದೆ ಇಂತಹ ಖಾಯಿಲೆಗಳಿಂದ ಮುಕ್ತರಾಗಬೇಕಾದರೆ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಆಗ ಮಾತ್ರ ಸೂಕ್ತ ರೀತಿಯಲ್ಲಿ ಖಾಯಿಲೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಮೈಸೂರಿನಲ್ಲಿಯೂ ಇದು ಹೆಚ್ಚಾಗುತ್ತಿದೆ. ನಾಡಿನ ತುಂಬೆಲ್ಲ ಬೆಳೆಯುತ್ತಿದೆ. ಇದನ್ನು ನಿಯಂತ್ರಿಸುವ ಅಗತ್ಯವಿದೆ. ಹಿರಿಯ ನಾಗರಿಕರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಬಹಳ ವರ್ಷಗಳಿಂದ ಸರ್ಕಾರದ ತಾಲೂಕು ಮಟ್ಟದ ಅಸ್ಪತ್ರೆಗಳನ್ನು ಉನ್ನತೀಕರಿಸಲು ಸಾಧ್ಯವಾಗಿಲ್ಲ. ಆರೋಗ್ಯದ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರಗಳು ಸಾಕಷ್ಟು ಅನುದಾನ ನೀಡುತ್ತಿಲ್ಲ. ಈ ಕಾರಣದಿಂದ ಪ್ರಧಾನ ಮಂತ್ರಿಯವರು ಆಯುಷ್ಮಾನ್ ಭಾರತ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಕರ್ನಾಟಕ ಸರ್ಕಾರವು ಸಹ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಕೋವಿಡ್ ನಂತರದ ಪುನಶ್ಚೇತನ ಕೇಂದ್ರ ಬಹಳ ಅವಶ್ಯಕವಾಗಿದೆ. ಕೋವಿಡ್ ಆರೈಕೆಯಷ್ಟೆ ಕೋವಿಡ್ನಿಂದ ಗುಣಮುಖರಾದವರ ಆರೈಕೆಯೂ ಮುಖ್ಯವಾಗಿದೆ. ಸೋಂಕಿತರು ಮನೋಸ್ಥೈರ್ಯವನ್ನು ಕಳೆದುಕೊಳ್ಳದೆ ಧೈರ್ಯದಿಂದಿರಬೇಕು. ವೈದ್ಯರು ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದರೂ ಯಾವುದೇ ವಿಶ್ರಾಂತಿಯನ್ನು ಪಡೆಯದೇ ಹಗಲಿರುಳು ರೋಗಿಗಳ ಆರೈಕೆಯಲ್ಲಿ ತೊಡಗಿರುವುದು ಶ್ಲಾಘನೀಯವಾದುದು ಎಂದು ಹೇಳಿದರು.
ಜೆಎಸ್ಎಸ್ ಎಹೆಚ್ಈಆರ್ನ ಸಮಕುಲಾಧಿಪತಿಗಳಾದ ಡಾ. ಬಿ. ಸುರೇಶ್ ಮಾತನಾಡಿ ಕೋವಿಡ್ ಬಂದ ಮೊದಲೆರಡು ತಿಂಗಳಲ್ಲಿ ಸರ್ಕಾರದ ಯಾವುದೇ ಆದೇಶವಿಲ್ಲದಿದ್ದರೂ ಜೆಎಸ್ಎಸ್ ಆಸ್ಪತ್ರೆ ಸಂಪೂರ್ಣ ತಯಾರಿಯಲ್ಲಿತ್ತು. ಸರ್ಕಾರ ಖಾಸಗಿ ಆಸ್ಪತ್ರೆಯ ಸಹಕಾರವನ್ನು ಕೋರಿದಾಗ ಸರ್ಕಾರದ ನಿರೀಕ್ಷೆಗೂ ಮೀರಿ ಆಸ್ಪತ್ರೆ ಸೇವೆ ಸಲ್ಲಿಸಿದೆ. ಈಗ ಕೋವಿಡ್ನ ನಂತರದ ಪುನಶ್ಚೇತನ ಕೇಂದ್ರದ ಅವಶ್ಯಕತೆಯನ್ನು ಮನಗಂಡು ಈ ಕೇಂದ್ರವನ್ನು ತೆರೆಯಲಾಗಿದೆ ಎಂದು ಹೇಳಿದರು.
ಡಾ. ಸಿ.ಜಿ. ಬೆಟಸೂರಮಠ, ಎಸ್.ಪಿ. ಮಂಜುನಾಥ್, ಡಾ. ಸುರೀಂದರ್ ಸಿಂಗ್, ಡಾ. ಹೆಚ್. ಬಸವನಗೌಡಪ್ಪ, ವೈದ್ಯಕೀಯ ಅಧೀಕ್ಷಕರಾದ ಡಾ. ಎಂ. ಗುರುಸ್ವಾಮಿ, ಆರ್. ಮಹೇಶ್ ಉಪಸ್ಥಿತರಿದ್ದರು.
ಡಾ. ಹೆಚ್.ವಿ. ಸೌಮ್ಯ ಪ್ರಾರ್ಥಿಸಿದರು. ಡಾ. ಶ್ಯಾಮ್ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಡಾ. ಶಿವಪ್ರಸಾದ್ ಹುಡೇದ್ ವಂದಿಸಿದರು. ಡಾ. ಪಿ. ಶಾಸ್ತಾರ ನಿರೂಪಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: