ದೇಶಪ್ರಮುಖ ಸುದ್ದಿ

ಬ್ರಿಕ್ಸ್ ವರ್ಚುವಲ್ ಸಭೆ: ಲಡಾಖ್ ಘರ್ಷಣೆ ಬಳಿಕ ಮೊದಲ ಬಾರಿಗೆ ಎದುರಾಗಲಿರುವ ಮೋದಿ-ಕ್ಸಿ ಜಿನ್‌ಪಿಂಗ್

ನವದೆಹಲಿ,ಅ.6-ಲಡಾಖ್ ಗಡಿ ಘರ್ಷಣೆಯ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬ್ರಿಕ್ಸ್ ವರ್ಚುವಲ್ ಸಭೆಯಲ್ಲಿ ಪರಸ್ಪರ ಎದುರಾಗಲಿದ್ದಾರೆ.

ಇಬ್ಬರೂ ನಾಯಕರ ನಡುವೆ ನಡೆಯಲಿರುವ ಸಂಭಾಷಣೆ ಕುರಿತು ಈಗಲೇ ತೀವ್ರ ಚರ್ಚೆಗಳು ಆರಂಭವಾಗಿವೆ. ನವೆಂಬರ್ 17ರಂದು ಇದೇ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬ್ರಿಕ್ಸ್ ಸಮ್ಮೇಳನ ನಡೆಯುತ್ತಿದ್ದು, ರಷ್ಯಾ ಈ ಸಮ್ಮೇಳನದ ನೇತೃತ್ವ ವಹಿಸಲಿದೆ.

ವಾಡಿಕೆಯಂತೆ ಐದೂ ದೇಶಗಳ ಉನ್ನತ ನಾಯಕರು ಪರಸ್ಪರ ಚರ್ಚೆ ನಡೆಸಬೇಕಿದೆ. ಆದರೆ ಭಾರತ-ಚೀನಾ ನಡುವೆ ಇದೀಗ ಲಡಾಖ್ ಗಡಿ ಘರ್ಷಣೆಯ ಕಾವು ಜೋರಾಗಿರುವುದರಿಂದ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್‌ಪಿಂಗ್ ನಡುವೆ ನಡೆಯಬಹುದಾದ ಚರ್ಚೆಯ ಬಗ್ಗೆ ಕುತೂಹಲ ಮೂಡಿದೆ.

ಕಳೆದ ವರ್ಷ ಬ್ರೆಜಿಲ್ ರಾಜಧಾನಿ ಬ್ರೆಜಿಲೀಯಾದಲ್ಲಿ ನಡೆದಿದ್ದ ಬ್ರಿಕ್ಸ್ ವಾರ್ಷಿಕ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್‌ಪಿಂಗ್ ಪರಸ್ಪರ ಭೇಟಿಯಾಗಿ ಚರ್ಚೆ ನಡೆಸಿದ್ದರು. ಆದರೆ ಈ ಬಾರಿ ಲಡಾಖ್ ಘರ್ಷಣೆ ಸಂಭವಿಸಿರುವುದರಿಂದ ಉಭಯ ನಾಯಕರು ಚರ್ಚೆ ನಡೆಸಲಿದ್ದಾರೋ ಅಥವಾ ಸಾಮೂಹಿಕ ಚರ್ಚೆಯಲ್ಲಿ ಮಾತ್ರ ಪಾಲ್ಗೊಳ್ಳಲಿದ್ದಾರೋ ಎಂಬ ಅನುಮಾನಗಳು ಮೂಡತೊಡಗಿವೆ.

ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ಸೌಥ್ ಆಫ್ರಿಕಾ(BRICS) ಸಂಘಟನೆ ವಿಶ್ವದ ಅರ್ಧದಷ್ಟು(3.6 ಬಿಲಿಯನ್) ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಬ್ರಿಕ್ಸ್‌ನ ವಾರ್ಷಿಕ ಜಿಡಿಪಿ 16.6 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಿದ್ದು, ಜಗತ್ತಿನ ಪ್ರಬಲ ಸಂಘಟನೆಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ ಎಂಬುದನ್ನು ಇಲ್ಲಿ ಗಮನಿಸಬಹುದು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: