ಪ್ರಮುಖ ಸುದ್ದಿಮೈಸೂರು

ಉಪಚುನಾವಣೆ ಸ್ವಪ್ರತಿಷ್ಠೆಯ ಕಣವಾಗಿದೆ : ಹೆಚ್.ವಿಶ್ವನಾಥ್ ಬೇಸರ

ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಗಳು ರಾಜಕೀಯ ಪಕ್ಷಗಳ ಚುನಾವಣೆಯಾಗದೆ ಸ್ವಪ್ರತಿಷ್ಠೆಯ ಕಣವಾಗಿದ್ದು ಪ್ರಜಾಪ್ರಭುತ್ವ ವಿರೋಧವಾಗಿದೆ ಎಂದು ಮಾಜಿ ಸಂಸದ ಅಡಗೂರು ವಿಶ್ವನಾಥ್ ಬೇಸರ  ವ್ಯಕ್ತಪಡಿಸಿದರು.

ಪತ್ರಕರ್ತರ ಭವನದಲ್ಲಿ , ಮೈಸೂರು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳು ಏಕವಚನದಲ್ಲಿ ದೋಷಾರೋಪಗಳನ್ನು ನಡೆಸುತ್ತಿರುವುದು ಪಕ್ಷಕ್ಕೂ ಹಾಗೂ ಭಾಷೆಗೂ ಧಕ್ಕೆಯಾಗಿದ್ದು ಚುನಾವಣಾ ಸಂಸ್ಕೃತಿಯನ್ನೇ ಕೊಂದು ಹಾಕಿದ್ದಾರೆ, ನಾನು ಭ್ರಷ್ಟ. ನೀನು ಭ್ರಷ್ಟ, ನಾನು ಜೈಲು..ನೀನು ಜೈಲು ಎನ್ನುವ ಕೆಳಮಟ್ಟದ ಭಾಷೆಯನ್ನು ಬಳಸುವುದರಿಂದ ಪಕ್ಷಕ್ಕೂ ಹಾಗೂ ವ್ಯಕ್ತಿ ಘನತೆಗೂ ಕುಂದುಂಟಾಗುವುದು ಎಂದು ಕಿಡಿ ಕಾರಿದರು. ಸಾರ್ವಜನಿಕರು ನಾಯಕರುಗಳಿಂದ ಇಂತಹ ಸಂಸ್ಕೃತಿಯನ್ನು ನಿರೀಕ್ಷಿಸುವುದಿಲ್ಲ. ಆದ್ದರಿಂದ ಭಾಷೆಯಲ್ಲಿ ಹಿಡಿತ ಸಾಧಿಸಿ ಹಾಗೂ ಚುನಾವಣೆಯಲ್ಲಿ ಜಿದ್ದಾಜಿದ್ದಿನ ವೈಷಮ್ಯ ಬೇಡವೆಂದರು.  ಅಭ್ಯರ್ಥಿಗಳನ್ನು ಗೆಲ್ಲಿಸುವುದು ಸೋಲಿಸುವುದು ಮತದಾರರಿಗೆ ಸೇರಿದ್ದು. ಅದಕ್ಕಾಗಿ ಸಂಯಮ ಕಳೆದುಕೊಳ್ಳಬಾರದೆಂದು ಕೋರಿದರು.

ಸಾರ್ವತ್ರಿಕ ಚುನಾವಣೆ ಗಮನವಿರಲಿ : ಉಪಚುನಾವಣೆ ನಡೆಸುವುದು ಪಕ್ಷದ ಕೆಲಸವಲ್ಲ. ಇನ್ನೇನು ಒಂದೂವರೆ ವರ್ಷದಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಗುತ್ತಿದ್ದು ಆ ಬಗ್ಗೆ ಸರ್ಕಾರ ಗಮನಹರಿಸಬೇಕು. ಉಪಚುನಾವಣೆಯಲ್ಲಿ ಮಂತ್ರಿಮಂಡಲ ಬಳಕೆ ಅವಶ್ಯವಿರಲಿಲ್ಲ, ಆದರೂ ಸ್ಥಳೀಯ ಕಾರ್ಯಕರ್ತರನ್ನು ದೂರವಿರಿಸಿ ಕೇವಲ ರಾಜ್ಯ ಮುಖಂಡರಗಳನ್ನು ಮಾತ್ರ ಪ್ರಚಾರದಲ್ಲಿ ತೊಡಗಿಕೊಂಡಿರುವುದು ಉತ್ತಮ ವಾತಾವರಣವಲ್ಲವೆಂದರು.

ರೈತ ಸಾಲ ಮನ್ನಾ ಮಾಡಿ : ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲ ಎದುರಾಗಿದೆ,  ಜಾನುವಾರುಗಳಿಗೆ ಹಾಗೂ ಮನುಷ್ಯರಿಗೆ  ಕುಡಿಯಲು ನೀರಿಲ್ಲ. ಆ ಬಗ್ಗೆ ಜನಪ್ರತಿನಿಧಿಗಳು ಪ್ರತಿಷ್ಠೆಯನ್ನು ಬದಿಗಿರಿಸಿ ಗಮನಹರಿಸಿ ಎಂದರು. ಬರದಿಂದಾಗಿ ರೈತರು ಆತ್ಮಹತ್ಯೆಗೆ ಶರಣಾಗುವುದನ್ನು ತಪ್ಪಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಂಡು  ರೈತರ ಸಾಲ ಮನ್ನಾ ಮಾಡಿ ಎಂದು ಕೋರಿದರು. ವೃಥಾ ಸುಣ್ಣ-ಬಣ್ಣ, ಕಟ್ಟಡ, ರಸ್ತೆ, ಆಸ್ಪತ್ರೆಗಳ ನಿರ್ಮಾಣವನ್ನು ಕುಂಠಿತಗೊಳಿಸಿ, ಉದ್ಯಮಗಳ ಸಬ್ಸಿಡಿ ಹಣವನ್ನು ಶೇ.25ರಷ್ಟು ಕಡಿತಗೊಳಿಸಿ.  12 ಬಾರಿ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋರಿಕೆಯ ಬಗ್ಗೆ ಅರಿವಿದ್ದು ಆ ಸೋರಿಕೆಯನ್ನು ತಡೆದು ರೈತರ ಸಾಲ ಮನ್ನಾ ಮಾಡುವ ಮೂಲಕ ರಾಜ್ಯದ ರೈತರ ಹಿತ ಕಾಪಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಉತ್ತರ ಪ್ರದೇಶ ಸರ್ಕಾರ ಆದರ್ಶವಾಗಲಿ ಎಂದರು.

ಧರಣಿ, ಪ್ರತಿಭಟನಾ ನಿರತರ ಮೇಲೆ ಪೊಲೀಸ್ ದೌರ್ಜನ್ಯ ನಿಲ್ಲಬೇಕು, ಪ್ರತಿಭಟನೆಯು ಪ್ರಜಾಪ್ರಭುತ್ವದ ಅಂಗ, ಅದನ್ನು ಮಟ್ಟಹಾಕಲು ಲಾಠಿ-ಬೂಟುಗಳ ಪ್ರಯೋಗ ಬೇಡವೆಂದರು.

ಕಾಲಾಯ ತಸ್ಮೈ ನಮಃ: ಕಳೆದ 30 ವರ್ಷಗಳಿಂದಲೂ ಕಾಂಗ್ರೆಸ್‍ನ ಭಂಟನಾಗಿ  ದುಡಿದಿರುವೆ. ಪಕ್ಷದಲ್ಲಿ ಹಿರಿಯ ನಾಯಕರುಗಳಿಗೆ ಬೆಲೆಯಿಲ್ಲ. ಆದರೂ ಪಕ್ಷ ಬಿಡುವ ನಿರ್ಧಾರದ ಬಗ್ಗೆ ಯೋಚಿಸಿಲ್ಲ.  ಕಾಲಾಯ ತಸ್ಮೈ ನಮಃ ಎಂದು ವ್ಯಂಗ್ಯವಾಡಿದರು. ಎ.15ರಂದು ಪಕ್ಷದ ವರಿಷ್ಠೆ ಸೋನಿಯಾಗಾಂಧಿಯವರನ್ನು ಭೇಟಿಯಾಗಿ ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಕ್ಕೆ ತರಲಾಗುವುದು ಎಂದರು. ಪ್ರಸ್ತುತ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಪ್ರಚಾರದಲ್ಲಿಯೂ ತಮ್ಮನ್ನು ದೂರವಿಟ್ಟಿರುವ, ಉದ್ದೇಶಪೂರ್ವಕವಾಗಿಯೇ ಮೂಲೆಗುಂಪಾಗಿಸಿದ ಕುರಿತು ಪ್ರಶ್ನಿಸಿದ್ದಕ್ಕೆ ಬೇಸರಿಸದೆ ಕಾದು ನೋಡಿ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಕಾಂಗ್ರೆಸ್‍ನಲ್ಲಿ ಹಿರಿತನಕ್ಕೆ ಮಾನ್ಯತೆ ಇಲ್ಲವೆಂದು ಹಿರಿಯ ಕಾಂಗ್ರೆಸ್ ಮುತ್ಸದಿ ಎಸ್.ಎಂ.ಕೃಷ್ಣ ರಾಜೀನಾಮೆ ಕೊಟ್ಟಿರಬಹುದು ಎಂದು ಸಮರ್ಥಿಸಿಕೊಂಡರು.

ಅಪ್ಪ-ಮಕ್ಕಳ ಪಕ್ಷ : ಕಾಂಗ್ರೆಸ್‍ ಪಕ್ಷ ಜೆಡಿಎಸ್‍ ಹಾದಿಯನ್ನು ಹಿಡಿದಿದ್ದು ಅಪ್ಪ-ಮಕ್ಕಳ ಪಕ್ಷವಾಗುತ್ತಿದೆ ಎಂದು ಅವರು, ನಂಜನಗೂಡು ಹಾಗೂ ಗುಂಡ್ಲುಪೇಟೆಯ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪರೋಕ್ಷ ಕಾರಣಿಕರ್ತರಾಗುತ್ತಿದ್ದು ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ತಟಸ್ಥರಾಗಿ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾರೆಂದರು.

ಸಂವಾದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಸಂಯಮದಿಂದಲೇ ಉತ್ತರಿಸಿ ಪ್ರಸ್ತುತ ರಾಜ್ಯ ರಾಜಕೀಯ ಹಾಗೂ ಕಾಂಗ್ರೆಸ್‍ನ ವಾಸ್ತವತೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಹಾಗೂ ಕಾರ್ಯದರ್ಶಿ ಲೋಕೇಶ್ ಬಾಬು ಉಪಸ್ಥಿತರಿದ್ದರು.  (ಕೆ.ಎಂ.ಆರ್-ಎಸ್.ಎಚ್)

Leave a Reply

comments

Related Articles

error: