ಮೈಸೂರು

ರಂಗಸಮುದ್ರ ಗ್ರಾಮ ಪಂಚಾಯಿತಿಯ ಪಿಡಿಓ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಪ್ರತಿಭಟನೆ

ಮೈಸೂರು,ಅ.6:- ಬಲಾಢ್ಯ ಕೋಮಿನ ಜನರ ಒತ್ತಡಕ್ಕೆ ಮಣಿದು ವಿಶ್ವಕರ್ಮ ಸಮುದಾಯದ ಬಡಕುಟುಂಬವೊಂದನ್ನು ಒಕ್ಕಲೆಬ್ಬಿಸಲು ನಿವೇಶನದ ಖಾತೆ ಮಾಡಿಕೊಡದೆ ನಿರ್ಮಾಣಗೊಳ್ಳುವ ಹಂತದಲ್ಲಿದ್ದ ಮನೆಯನ್ನು ಕೆಡುವಲು ಕಾರಣರಾಗಿರುವ ರಂಗಸಮುದ್ರ ಗ್ರಾಮ ಪಂಚಾಯಿತಿಯ ಪಿಡಿಓ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಕುಟುಂಬದೊಂದಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಅಂಬೇಡ್ಕರ್ ವಾದ) ಮುಖಂಡರು ಹಾಗೂ ಕಾರ್ಯಕರ್ತರು ತಿ.ನರಸೀಪುರ ತಾಲೂಕು ಪಂಚಾಯಿತಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

ತಿ.ನರಸೀಪುರ ಪಟ್ಟಣದ ತಾಲೂಕು ಪಂಚಾಯಿತಿ ಮುಂಭಾಗ ನಾಗರಾಜು ಆಚಾರ್ಯರು ಕುಟುಂಬದ ಸದಸ್ಯರೊಂದಿಗೆ ಪ್ರತಿಭಟನಾ ಧರಣಿಯನ್ನು ಪ್ರಾರಂಭಿಸಿದ ಕರಾದಸಂಸ ಮುಖಂಡರು ಹಾಗೂ ಕಾರ್ಯಕರ್ತರು ಕೆಲವರ ಹಿತಾಸಕ್ತಿಗಾಗಿ ಬಡವರು ಬದುಕುವ ನೆಲೆಯನ್ನು ಕಸಿಯಲು ಹೊರಟಿರುವ ತಾಲ್ಲೂಕಿನ ರಂಗಸಮುದ್ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಿದಾನಂದ ಅವರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಪಿಡಿಓ ವಿರುದ್ಧ ಕ್ರಮ ಕೈಗೊಂಡು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಕರಾದಸಂಸ ಜಿಲ್ಲಾ ಸಂಚಾಲಕ ಬನ್ನಹಳ್ಳಿ ಸೋಮಣ್ಣ ಮಾತನಾಡಿ, ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ಕಳೆದ 1969 ರಿಂದಲೂ ವಾಸವಿರುವ ವಿಶ್ವಕರ್ಮ ಕುಟುಂಬಕ್ಕೆ ದಾಖಲೆಗಳಿದ್ದರೂ ನಿವೇಶನವನ್ನು ಖಾತೆ ಮಾಡಿಕೊಡಲು ಮೀನಾಮೇಷ ಎಣಿಸುತ್ತಿರುವ ಪಿಡಿಓ ಚಿದಾನಂದ ಅವರು ಕೆಲವರ ಓತ್ತಡಕ್ಕೆ ಸಿಲುಕಿ ವಾಸವಿರುವ ಜಾಗದಿಂದಲೇ ಕುಟುಂಬವನ್ನು ಒಕ್ಕಲೆಬ್ಬಿಸಲು ಕಟ್ಟಲಾಗುತ್ತಿದ್ದ ಮನೆಯನ್ನು ಕೆಡವಿ ಹಾಕಿದ್ದಾರೆ. ಆದ್ದರಿಂದ ತಾ.ಪಂ ಹಾಗೂ ಜಿ.ಪಂ ಕಾರ್ಯನಿರ್ವಹಣಾಧಿಕಾರಿಗಳು ಪಿಡಿಓ ವಿರುದ್ಧ ಕಾನೂನು ಕ್ರಮ ಜರುಗಿಸಿ, ಸಂತ್ತಸ್ತ ಕುಟುಂಬಕ್ಕೆ ನಿವೇಶನದ ಖಾತೆಯನ್ನು ಮಾಡಿಕೊಡಬೇಕು. ಕ್ರಮ ಜರುಗಿಸಲು ವಿಳಂಬ ಮಾಡಿದರೆ ಜಿ.ಪಂ ಮುಂಭಾಗ ಧರಣಿ ಕೂರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂತ್ರಸ್ತ ನಾಗರಾಜ ಆಚಾರ್ ಮಾತನಾಡಿ, ಪ್ರಬಲ ಕೋಮಿನ ಜನರ ಒತ್ತಾಯಕ್ಕೆ ಮಣಿದು ವಾಸವಿರುವ ನಿವೇಶನ ಕಿತ್ತುಕೊಳ್ಳಲಾಗುತ್ತಿದೆ. ನಮ್ಮ ಕುಟುಂಬಗಳು ಕಡಿಮೆ ಸಂಖ್ಯೆಯಲ್ಲಿರುವುದರಿಂದ ಜಮೀನನ್ನು ಕೂಡ ಒತ್ತುವರಿ ಮಾಡಿಕೊಳ್ಳುವ ಕೃತ್ಯವನ್ನು ಮಾಡಲಾಗುತ್ತಿದೆ. ವಾಸದ ನಿವೇಶನವನ್ನು ಉಳಸಿಕೊಡದಿದ್ದರೆ ಕುಟುಂಬದ ಸದಸ್ಯರೆಲ್ಲರೂ ಬೀದಿ ಪಾಲಾಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ನಂತರ ಉದ್ಯೋಗ ಖಾತರಿ ಯೋಜನೆ ಸಹಾಯಕ ನಿರ್ದೇಶಕ ಆರ್.ಮಹದೇವು ಅವರು ತಾ
ಪಂ ಕಾರ್ಯನಿರ್ವಹಕ ಅಧಿಕಾರಿಯ ಪರವಾಗಿ ಮನವಿ ಪತ್ರವನ್ನು ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಕರಾದಸಂಸ ಜಿಲ್ಲಾ ಸಂಘಟನಾ ಸಂಚಾಲಕ ನಾಗರಾಜು ವಾಟಾಳು, ತಾಲ್ಲೂಕು ಸಂಚಾಲಕ ಬಸವರಾಜು, ಮುಖಂಡರಾದ ರಾಮು ಮಾದಿಗಹಳ್ಳಿ, ಕಂಬಯ್ಯ, ಸಾಗರ್, ನವೀನ್, ಕೃಷ್ಣ, ತೇಜು, ಡಿ.ಸಿ.ಮಹದೇವಸ್ವಾಮಿ, ಬಸವರಾಜು, ಮಹದೇವಯ್ಯ, ಚಿನ್ನಸ್ವಾಮಿ, ಕಾಂತರಾಜು, ಮಹದೇವಸ್ವಾಮಿ ಹಾಗೂ ಇನ್ನಿತರರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: