ದೇಶಪ್ರಮುಖ ಸುದ್ದಿ

ಪಳನಿಸ್ವಾಮಿಯೇ ಮುಂದಿನ ಸಿಎಂ ಅಭ್ಯರ್ಥಿ: ಎಐಎಡಿಎಂಕೆ ಘೋಷಣೆ

ಚೆನ್ನೈ,ಅ.7-ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಗೆ ಹಾಲಿ ಮುಖ್ಯಮಂತ್ರಿಯಾಗಿರುವ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಎಐಎಡಿಎಂಕೆ ತೀರ್ಮಾನಿಸಿ ಘೋಷಣೆ ಮಾಡಿದೆ.

ಇದರಿಂದ ತಮಿಳುನಾಡು ರಾಜಕೀಯದಲ್ಲಿ ಎಲ್ಲವೂ ಸುಖಾಂತ್ಯವಾಗುವ ಲಕ್ಷಣ ಕಾಣುತ್ತಿದೆ. ಕಳೆದ ಕೆಲ ದಿನಗಳಿಂದೀಚೆಗೆ ಮುಖ್ಯಮಂತ್ರಿ ಇ ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಸುದ್ದಿಯಾಗಿತ್ತು.

ಉಪ ಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ವಂ ಬೇಡಿಕೆಯಂತೆಯೇ ಪಕ್ಷದ ನೀತಿ-ನಿರೂಪಣೆ ಸಂಬಂಧ 11 ಜನರ ಸಮಿತಿ ರಚಿಸಲು ಪಳನಿಸ್ವಾಮಿ ಒಪ್ಪಿಕೊಂಡಿದ್ದು, ಪನ್ನೀರ್‌ ಸೆಲ್ವಂ ಅವರೇ ಪಕ್ಷದ ಆಗುಹೋಗುಗಳನ್ನು ನೋಡಿಕೊಳ್ಳಲಿದ್ದಾರೆ. ಹಿರಿಯ ಸಚಿವರ ತಂಡ ಮಂಗಳವಾರ ದಿನವಿಡೀ ಇಬ್ಬರೂ ನಾಯಕರ ಮನೆಯಲ್ಲಿ ಸರಣಿ ಸಂಧಾನ ಸಭೆಗಳನ್ನು ನಡೆಸಿತ್ತು. ಬಳಿಕ ಪಳನಿಸ್ವಾಮಿ ಸಿಎಂ ಅಭ್ಯರ್ಥಿ, ಪನ್ನೀರ್‌ ಸೆಲ್ವಂಗೆ ಪಕ್ಷದ ಹೊಣೆ ಎಂಬ ಸಂಧಾನಕ್ಕೆ ಬರಲಾಯಿತು. ಇಂದು ಈ ಕುರಿತು ಅಧಿಕೃತ ಘೋಷಣೆ ಹೊರಬಿದ್ದಿದೆ.

ಪಕ್ಷದ 11 ಸದಸ್ಯರ ಸಂಚಾಲಕ ಸಮಿತಿ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆಯಿಟ್ಟಿದ್ದಾರೆ ಎಂದು ಪನ್ನೀರ್ ಸೆಲ್ವಂ ದಿವಂಗತ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ನೆನಪು ಮಾಡಿಕೊಂಡರು.

2017ರಲ್ಲಿ ಪಳನಿಸ್ವಾಮಿ ಮತ್ತು ಸೆಲ್ವಂ ಬಣಗಳ ವಿಲೀನ ಮಾತುಕತೆಯಲ್ಲಿ ಪಕ್ಷವನ್ನು ನಡೆಸಿಕೊಂಡಲು ಹೋಗಲು 11 ಜನರ ಸಮಿತಿ ರಚಿಸಲು ತೀರ್ಮಾನಿಸಲಾಗಿತ್ತು. ಇದುವರೆಗೂ ಸಮಿತಿ ರಚನೆ ಆಗಿರಲಿಲ್ಲ. ಶಶಿಕಲಾ ನಟರಾಜನ್‌ ಅವರನ್ನು ಪಕ್ಷದಿಂದ ಹೊರದಬ್ಬುವ ಉದ್ದೇಶದಿಂದ ಪ್ರಧಾನ ಕಾರ್ಯದರ್ಶಿ ಹುದ್ದೆ ರದ್ದುಪಡಿಸಿ ಸಮನ್ವಯಕಾರ, ಜಂಟಿ ಸಮನ್ವಯಕಾರ ಮತ್ತು ಉಪ ಸಮನ್ವಯಕಾರ ಹುದ್ದೆಗಳನ್ನು ಸೃಷ್ಟಿಸಲಾಗಿತ್ತು. ಪಕ್ಷದಲ್ಲಿಅತ್ಯುನ್ನತ ಹುದ್ದೆಯಾಗಿದ್ದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಜೆ.ಜಯಲಲಿತಾ ಅವರು ಮೂರು ದಶಕಗಳ ಕಾಲ ನಿರ್ವಹಿಸಿದ್ದರು. ಜಯಾ ನಿಧನದ ಬಳಿಕ ಅವರ ಆಪ್ತ ಗೆಳತಿ ಶಶಿಕಲಾ ಈ ಸ್ಥಾನ ವಹಿಸಿಕೊಂಡಿದ್ದರು.ಕೇಂದ್ರ ಸರಕಾರದ ಜತೆಗಿನ ಯಾವುದೇ ಮಾತುಕತೆ ನಡೆಸುವುದಿದ್ದರೆ ಅಥವಾ ಸಭೆಯಲ್ಲಿ ಭಾಗಿಯಾಗುವುದಿದ್ದರೆ ಅದನ್ನು ಮುಖ್ಯಮಂತ್ರಿ ನಿರ್ವಹಿಸಬೇಕು. ಪಕ್ಷದ ಹೊಣೆಗಾರಿಕೆಯನ್ನು ಪನ್ನೀರ್‌ ಸೆಲ್ವಂ ನೋಡಿಕೊಳ್ಳಬೇಕು ಎಂದೂ ತೀರ್ಮಾನವಾಗಿತ್ತು. ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ತಮ್ಮನ್ನು ಕಡೆಗಣಿಸುವುದರ ಜತೆಗೆ ಪಕ್ಷದಲ್ಲೂ ಹಿಡಿತ ಸಾಧಿಸುತ್ತಿದ್ದಾರೆ ಎನ್ನುವುದು ಪನ್ನೀರ್‌ ಸೆಲ್ವಂ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಇದೀಗ ಸಂಧಾನದ ಮೂಲಕ ನೆನೆಗುದಿಗೆ ಬಿದ್ದಿದ್ದ 11 ಜನರ ಸಮಿತಿ ರಚನೆಯಾಗಲಿದೆ. ಸುಸೂತ್ರ ಅಧಿಕಾರಕ್ಕೆ ಈ ಸಮಿತಿ ನೆರವಾಗಲಿದೆ.

ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ ನಟರಾಜನ್‌ 2021ರ ಜನವರಿಯಲ್ಲಿ ಬಿಡುಗಡೆಯಾಗಲಿದ್ದಾರೆ. ಜಯಾ ಹೆಸರು ಹೇಳಿಕೊಂಡು ಅವರು ಪುನಃ ಎಐಎಡಿಎಂಕೆಗೆ ಮರಳಲು ಯತ್ನಿಸಬಹುದು ಅಥವಾ ಸೋದರಳಿಯ ಟಿಟಿವಿ ದಿನಕರನ್‌ ಸ್ಥಾಪಿಸಿರುವ ಅಮ್ಮಾ ಮಕ್ಕಳ್‌ ಮುನ್ನೇತ್ರ ಕಝಗಂ (ಎಎಂಎಂಕೆ) ಪಕ್ಷದ ಅಧ್ಯಕ್ಷರಾಗಿಯೇ ಮುಂದುವರಿಯಬಹುದು. ಏನೇ ಆದರೂ ಜಯಲಲಿತಾ ಮಟ್ಟಕ್ಕೆ ಬೆಳೆಯಲು ಬಿಡಬಾರದು ಎನ್ನುವುದು ಪನ್ನೀರ್‌ ಸೆಲ್ವಂ ಹಠ. ಹೀಗಾಗಿಯೇ ಅವರು ಪಕ್ಷದಲ್ಲಿ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿದ್ದಾರೆ. ಜಯಲಲಿತಾ ಜೈಲಿಗೆ ಹೋದ ಸಂದರ್ಭದಲ್ಲೆಲ್ಲ ಪನ್ನೀರ್‌ ಸೆಲ್ವಂ ಅವರೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಜಯಾ ನಿಧನದ ಬಳಿಕವೂ ಸೆಲ್ವಂ ಅವರೇ ಸಿಎಂ ಆಗಿದ್ದರು. ಪಕ್ಷವನ್ನು ಶಶಿಕಲಾ ತಮ್ಮ ಹಿಡಿತಕ್ಕೆ ತೆಗೆದುಕೊಂಡ ಬಳಿಕ ಪಳನಿಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಈ ಮೂರು ವರ್ಷದಲ್ಲಿ ಪಳನಿಸ್ವಾಮಿ ನಿರಂತರವಾಗಿ ಶಶಿಕಲಾ ಸಂಪರ್ಕದಲ್ಲಿದ್ದಾರೆ ಎನ್ನುವ ಅನುಮಾನವೂ ಸೆಲ್ವಂ ಬಣಕ್ಕಿದೆ. ಇದೇ ಕಾರಣಕ್ಕೆ ಪಕ್ಷದಲ್ಲಿ ತನ್ನದೆ ಬಲವನ್ನು ಸೃಷ್ಟಿಲು ಈ 11 ಜನರ ಸಮಿತಿಯನ್ನು ರಚಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: