ಪ್ರಮುಖ ಸುದ್ದಿಮೈಸೂರು

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಹೊಸ ಮನ್ವಂತರಕ್ಕೆ ನಾಂದಿಯಾಗಲಿದೆ : ಸಚಿವ ಡಿ.ವಿ.ಸದಾನಂದಗೌಡ

ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿರುವುದು ಮಾತ್ರ ವಿಷಾದ

ಮೈಸೂರು,ಅ.8:- ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸಬೇಕು ಎಂಬ ಉದ್ದೇಶದಿಂದ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿವಿ ಸದಾನಂದಗೌಡ ತಿಳಿಸಿದರು.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವಿವಿಧ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ಕಿಸಾನ್ ಕಾರ್ಡ್, ಸೊಯ್ಲ ಹೆಲ್ತ್, ಕಾರ್ಡ್ , ಕಡಿಮೆ ಬಡ್ಡಿದರದ ಸಾಲ, ಆನ್ ಲೈನ್ ಮೂಲಕ ಕೃಷಿ ಉತ್ಪನ್ನ ಮಾರಾಟಕ್ಕಾಗಿ ಇ-ನ್ಯಾಮ್ ಡಿಜಿಟಲ್ ಪ್ಲಾಟ್ ಫಾರ್ಮ್, ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ರೈತರಿಗೆ ವರ್ಷಕ್ಕೆ 6ಸಾವಿರದಂತೆ ನೇರ ನಗದು ವರ್ಗಾವಣೆ ಸಮಯಕ್ಕೆ ಸರಿಯಾಗಿ ಸಮರ್ಪಕ ಗೊಬ್ಬರ ಸರಬರಾಜು, ವೃದ್ಧಾಪ್ಯ ಪಿಂಚಣಿ, ಬೆಳೆ ವಿಮೆ, ನೀರಾವರಿ ಸೌಲಭ್ಯ ಹೆಚ್ಚಳ, ಕೋಲ್ಡ್ ಸ್ಟೋರೇಜ್ ಸರಪಣಿ ವಿಸ್ತರಣೆ ರಫ್ತಿಗೆ ಪ್ರೋತ್ಸಾಹ ಸೇರಿದಂತೆ ಹಲವು ಯೋಜನೆ ನೀಡಲಾಗಿದೆ. ಸ್ವಾವಲಂಬಿ ಭಾರತ ಯೋಜನೆಯಲ್ಲೂ ಕೃಷಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒಂದು ಲಕ್ಷ ಕೋ.ರೂ.ಒದಗಿಸಲಾಗಿದೆ ಎಂದರು.
ಕೃಷಿ ವಲಯದ ಅಮೂಲಾಗ್ರ ಸುಧಾರಣೆಗಾಗಿ ನಮ್ಮ ಸರ್ಕಾರ ಕೃಷಿ ಸಂಬಂಧಿತ ಮೂರು ಮಸೂದೆಗಳನ್ನು ರಚಿಸಲು ಮುಂದಾಯಿತು. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ಸುಗಮೀಕರಣ) ಮಸೂದೆ 2020, ರೈತರ(ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ 2020, ಅಗತ್ಯ ಸರಕುಗಳ(ತಿದ್ದುಪಡಿ)ಮಸೂದೆ 2020 ಕೃಷಿ ಮಸೂದೆಗಳು ದಶಕಗಳಿಂದ ವಿವಿಧ ಸಂಕೋಲೆಗಳಿಂದ ಬಳಲುತ್ತಿದ್ದ ರೈತರ ಸಮುದಾಯವನ್ನು ಬಂಧಮುಕ್ತಗೊಳಿಸಿವೆ ಎಂದರು.
ಕೇಂದ್ರವು ಅಂಗೀಕರಿಸಿದ ಹೊಸ ಕಾಯ್ದೆಗಳಿಂದ ಎಲ್ಲ ಬಂಧಗಳಿಂದ ಮುಕ್ತಗೊಳಿಸಿದೆ. ರೈತರು ಈಗ ತಮ್ಮ ಉತ್ಪನ್ನಗಳನ್ನು ದೇಶದ ಯಾವುದೇ ಮೂಲೆಯಲ್ಲಿ ಯಾರಿಗೆ ಬೇಕಾದರೂ ತಮಗಿಷ್ಟ ಬಂದ ದರದಲ್ಲಿ ಮಾರಬಹುದು, ಒಂದು ದೇಶ-ಒಂದು ಕೃಷಿ ಮಾರುಕಟ್ಟೆ ಎಂಬ ಪರಿಕಲ್ಪನೆಗೆ ಪೂರಕವಾಗಿದೆ ಎಂದು ತಿಳಿಸಿದರು. ಹೊಸ ಕಾಯ್ದೆಯು ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಿದ್ದು, ಮೈಸೂರಿನಲ್ಲಿ ಬೆಳೆದ ಬೆಳೆಯನ್ನು ರೈತ ಮಧ್ಯಪ್ರದೇಶಕ್ಕೆ ಕೊಂಡೊಯ್ದು ಮಾರಬಹುದು. ಬೇಕೆಂದರೆ ತನ್ನ ಹೊಲದಲ್ಲಿಯೇ ಮಾರಾಟ ಮಾಡಬಹುದು ಹೊಸ ಕಾಯ್ದೆಯಿಂದ ಅಂತರ್ ರಾಜ್ಯ ಸಾಗಣೆಗಾಗಲಿ, ಮಾರಾಟಕ್ಕಾಗಲಿ ಯಾವ ನಿರ್ಬಂಧವೂ ಇರುವುದಿಲ್ಲ ಎಂದರು.
ಎಲ್ಲಕ್ಕಿಂತ ಮಿಗಿಲಾಗಿ ರೈತನಿಗೆ ತನ್ನ ಕೃಷಿ ಉತ್ಪನ್ನ ಮಾರಾಟ ಹಾಗೂ ಆದಾಯಕ್ಕೆ ಸಂಬಂಧಿಸಿದಂತೆ ಯಾವುದೇ ಅನಿಶ್ಚಿತತೆ ಇರಲಾರದು. ಅಗತ್ಯ ಸರಕುಗಳ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಏಕದಳ, ದ್ವಿದಳ ಧಾನ್ಯಗಳು, ಕಾಳುಕಡಿ, ಆಲೂಗಡ್ಡೆ, ಈರುಳ್ಳಿ ಇವೇ ಮುಂತಾದ ಬೆಳೆಗಳ ಸಾಗಣೆ ಮೇಲಿನ ನಿರ್ಬಂಧವನ್ನು ತೆಗೆದುಹಾಕಲಾಗಿದೆ. ಇದರಿಂದ ದೇಶದ ವಿವಿಧ ರಾಜ್ಯಗಳಲ್ಲಿ ಬೇರೇ ಬೇರೆ ಬೆಳೆಗಳಪೂರೈಕೆಯಲ್ಲಿ ಸಮತೋಲನ ಉಂಟಾಗಲಿದೆ. ಬೆಲೆಯಲ್ಲಿಯೂ ಸ್ಥಿರತೆ ಬರಲಿದೆ. ಹಾಗೆಯೇ ಆಹಾರ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ದೊರಕಲಿದೆ. ವಿಫುಲ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಒಟ್ಟಿನಲ್ಲಿ ಈ ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಹೊಸ ಮನ್ವಂತರಕ್ಕೆ ನಾಂದಿಯಾಗಲಿದೆ ಎಂದು ತಿಳಿಸಿದರು.
ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿರುವುದು ಮಾತ್ರ ವಿಷಾದ. ಮಸೂದೆಗಳಲ್ಲಿ ಅವರಿಗೆ ಏನೂ ಋಣಾತ್ಮಕ ಅಂಶಗಳು ಸಿಗುತ್ತಿಲ್ಲ. ಹಾಗಾಗಿ ಮಸೂದೆಗಳ ಬಗ್ಗೆ ಸುಳ್ಳಿನ ಮಹಾಪೂರವನ್ನೇ ಹರಿಸಿ ಸರ್ಕಾರದ ವಿರುದ್ಧ ರೈತರನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಿದ್ದು, ಹೇಗಾದರೂ ಸರ್ಕಾರದ ಹೆಸರು ಕೆಡಿಸಬೇಕು ಎಂದು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.
ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಹಿಂತೆಗೆದುಕೊಳ್ಳಲಾಗುತ್ತದೆ ಎಂಬ ಹಸೀ ಸುಳ್ಳನ್ನು ಮಸೂದೆ ವಿರೋಧಿಗಳು ರೈತ ಸಮುದಾಯದಲ್ಲಿ ಹರಡುತ್ತಿದ್ದಾರೆ. ಅಂತಹ ಯಾವ ಅಂಶವೂ ಮಸೂದೆಯಲ್ಲಿ ಇಲ್ಲ. ಭವಿಷ್ಯದಲ್ಲಿ ಅಂತಹ ಕ್ರಮ ಕೈಗೊಳ್ಳುವ ಯೋಚನೆ ಕೂಡ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು. ಕನಿಷ್ಠ ಬೆಂಬಲ ಬೆಲೆ ಮುಂದುವರಿಯುವುದಷ್ಟೇ ಅಲ್ಲ. ಆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗುತ್ತದೆ. ಹಂಗಾಮಿಗೆ ಮುಂಚೆಯೇ ಕನಿಷ್ಠ ಬೆಂಬಲ ಬೆಲೆ ಘೋಷಣೆಯಾಗುತ್ತದೆ. ಬೆಂಬಲ ಬೆಲೆ ಮುಂದುವರಿಸುವ ಕುರಿತು ಕೃಷಿಸಚಿವರು ಸಂಸತ್ ನಲ್ಲಿಯೂ ಸ್ಪಷ್ಟಪಡಿಸಿದ್ದಾರೆಂದರು. ಈಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ರದ್ದಾಗಲಿವೆ ಎಂಬುದು ರೈತರನ್ನು ದಾರಿ ತಪ್ಪಿಸಲು ಹೇಳುತ್ತಿರಯುವ ಮಾತು. ರೈತರ ಭೂಮಿ ಕಂಪನಿಯ ಪಾಲಾಗಲ್ಲ, ಲೀಸ್ ಪಡೆಯುವುದು ಅಡಮಾನ ಇಡುವುದನ್ನು ಮಸೂದೆಯಲ್ಲಿ ನಿಷೇಧಿಸಲಾಗಿದೆ. ರೈತರ ಭೂಮಿ ಪರಭಾರೆಯಾಗುವ ಪ್ರಶ್ನೆಯೇ ಇಲ್ಲ ಎಮದು ಸ್ಪಷ್ಟಪಡಿಸಿದರು. ಇದು ಮಾಹಿತಿಯ ಯುಗ. ಸತ್ಯವನ್ನು ಬಹುಕಾಲ ಮುಚ್ಚಿಡಲು ಸಾದ್ಯವಿಲ್ಲ. ಸುಳ್ಳುಪ್ರಚಾರದಲ್ಲಿ ತೊಡಗಿ ಜನರ ಮುಂದೆ ಬೆತ್ತಲಾಗಬೇಡಿ ಎಂದು ವಿರೋಧಪಕ್ಷಗಳಿಗೆ ಸಲಹೆ ನೀಡಿದರು. ರೈತರು ಪಟ್ಟಭ ದ್ರ ಹಿತಾಸಕ್ತಿಗಳ ಅಪಪ್ರಚಾರಕ್ಕೆ ಬಲಿಯಾಗುವುದಿಲ್ಲವೆಂಬ ಸಂಪೂರ್ಣ ಭರವಸೆ ಇದೆ. ರೈತರಿಗೆ ಮಸೂದೆಯ ಸಂಪೂರ್ಣ ಮಾಹಿತಿ ನೀಡಿ, ಆಗ ಸತ್ಯ ಏನು ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್ ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: