
ದೇಶಪ್ರಮುಖ ಸುದ್ದಿ
ನಾಳೆ ಪಾಟ್ನಾದಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅಂತ್ಯಕ್ರಿಯೆ
ನವದೆಹಲಿ,ಅ.9-ನಿನ್ನೆ ರಾತ್ರಿ ನಿಧನರಾದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಅಂತ್ಯಕ್ರಿಯೆ ನಾಳೆ (ಶನಿವಾರ) ಪಾಟ್ನಾದಲ್ಲಿ ನೆರವೇರಲಿದೆ.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಪಾಸ್ವಾನ್ ಅವರ ಪಾರ್ಥಿವ ಶರೀರವನ್ನು ದೆಹಲಿಯ ನಿವಾಸಕ್ಕೆ ತಂದು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಇಂದೇ ಪಾಟ್ನಾ ಕ್ಕೆ ಕರೆದ್ಯೊಯ್ದು ಪಕ್ಷದ ಕಚೇರಿಯಲ್ಲಿ ಕೆಲ ಕಾಲ ಇಡಲಾಗುವುದು ಎಂದು ಹೇಳಲಾಗುತ್ತಿದೆ. ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ದೆಹಲಿಯ ಪಾಸ್ವಾನ್ ಅವರ ನಿವಾಸದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತಾ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ನಾಯಕರು ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.
ಕೇಂದ್ರ ಆಹಾರ ಸಚಿವ, ಲೋಕ ಜನಶಕ್ತಿ ಪಕ್ಷದ ಸಂಸ್ಥಾಪಕ ಹಾಗೂ ದೇಶದ ಪ್ರಮುಖ ದಲಿತ ನಾಯಕ ರಾಮವಿಲಾಸ್ ಪಾಸ್ವಾನ್ ಅವರು ಗುರುವಾರ ನಿಧನ ಹೊಂದಿದ್ದಾರೆ. ಕಳೆದ ವಾರ ಏಮ್ಸ್ ಆಸ್ಪತ್ರೆಯಲ್ಲಿ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪಾಸ್ವಾನ್ ಅವರು, ಶೀಘ್ರದಲ್ಲೇ ಇನ್ನೊಂದು ಸರ್ಜರಿಗೆ ಒಳಗಾಗಬೇಕಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್, ಎಂ.ಎನ್)