ಪ್ರಮುಖ ಸುದ್ದಿಮೈಸೂರು

ಬಿಜೆಪಿಯ ಮಿಷನ್ 150 ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹುಸಿ ಬಾಂಬ್ ಆಗಲಿದೆ : ಸಿದ್ದರಾಮಯ್ಯ

 ಬಿಜೆಪಿಯ ಮಿಷನ್ 150  ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹುಸಿ ಬಾಂಬ್ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ನಂಜನಗೂಡು ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರ ಪರವಾಗಿ ರೋಡ್ ಶೋ ನಡೆಸಿ ಮತ ಯಾಚಿಸಿದ ಅವರು, ಕಾರ್ಯಕರ್ತರ ಬೃಹತ್ ಸಭೆ ಉದ್ದೇಶಿಸಿ ಮಾತನಾಡಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ನಾನು ಮುಖ್ಯಮಂತ್ರಿ ಆಗುತ್ತೇನೆ. ನಮ್ಮದು ಮಿಷನ್ 150 ಎಂದು ಯಡಿಯೂರಪ್ಪ ಅವರು ಹೇಳುತ್ತಿದ್ದಾರೆ. ಆದರೆ ಅದು ಠುಸ್ ಆಗಲಿದೆ.  2018ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಸರ್ಕಾರದ ಕಾರ್ಯಕ್ರಮಗಳನ್ನು ಮೆಚ್ಚಿರುವ ಜನತೆ ನಮಗೇ ಆಶಿರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ನಾನು ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳುವ ಯಡಿಯೂರಪ್ಪ ಅವರು ತಾವೇ ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡಿದ್ದರು. ಸೈಕಲ್ ಕೊಟ್ಟಿದ್ದನ್ನು ಹೊರತುಪಡಿಸಿದರೆ ಅವರಿಂದ ಏನೂ ಆಗಲಿಲ್ಲ. ಈಗ ನಾವೂ ಶಾಲಾ ಮಕ್ಕಳಿಗೆ ಸೈಕಲ್ ಕೊಡುತ್ತಿದ್ದೇವೆ. ಅದರ ಜೊತೆಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದ ಜನರಿಗೆ ಕೊಟ್ಟಿದ್ದ ಭರವಸೆಗಳ ಪೈಕಿ ಶೇ. 90ರಷ್ಟು ಈಡೇರಿಸಿದ್ದೇವೆ ಎಂದು ಹೇಳಿದರು.
ನಮ್ಮ ಸಾಧನೆಗಳ ಪಟ್ಟಿ ದೊಡ್ಡದಾಗಿದೆ. ಎಲ್ಲ ವರ್ಗದವರನ್ನು ಒಗ್ಗೂಡಿಸಿಕೊಂಡು ಹೋಗುವ, ಅವರಿಗಾಗಿ ಕೆಲಸ ಮಾಡುವ ಶಕ್ತಿ ಮತ್ತು ಸಾಮರ್ಥ್ಯ ಇರುವುದು ಕಾಂಗ್ರೆಸ್‍ಗೆ ಮಾತ್ರ. ಹೀಗಿರುವಾಗ ಬಿಜೆಪಿಗೆ ಏಕೆ ಮತ ಕೊಡಬೇಕು. “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಎನ್ನುವ ಬಿಜೆಪಿಯವರು ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರಿಗೆ ಒಂದೇ ಒಂದು ಟಿಕೆಟ್ ಕೊಡಲಿಲ್ಲ. ಈ ಕುರಿತು ವಿಧಾನ ಪರಿಷತ್ತಿನಲ್ಲಿ ನಮ್ಮ ಸದಸ್ಯರೊಬ್ಬರು ಈಶ್ವರಪ್ಪ ಅವರನ್ನು ಪ್ರಶ್ನಿಸಿದರೆ “ನೋ ವೋಟ್, ನೋ ಸೀಟ್” ಎಂದು ಉತ್ತರಿಸಿದರು. ಅಲ್ಪಸಂಖ್ಯಾತರನ್ನು ಹೊರಗಿಡುವುದಾದರೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಹೇಗೆ ಆಗುತ್ತದೆ ? ಎಂದು ಪ್ರಶ್ನಿಸಿದರು.
ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಪಕ್ಷ ಉಪ ಚುನಾವಣೆ ನಡೆಸುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಅದು ಯಾರಪ್ಪನ ದುಡ್ಡು ಎಂದು ಕೇಳಿದ್ದಾರೆ. ಯಾರಪ್ಪನ ಮನೆಯ ಹಣವೂ ಅದಲ್ಲ. ರಾಜ್ಯದ ಆರೂವರೆ ಕೋಟಿ ಜನರ ದುಡ್ಡು ಅದಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಹೇಗೆ ಖರ್ಚು ಮಾಡಬೇಕು ಎಂಬುದು ನಮಗೂ ತಿಳಿದಿದೆ. ಆ ಬಗ್ಗೆ ಬಿಜೆಪಿಯವರಿಂದ ಪಾಠ ಕಲಿಯುವ ಅಗತ್ಯ ನಮಗಿಲ್ಲ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರೇ ಜನಪ್ರತಿನಿಧಿಗಳ ಮಾಲೀಕರು. ಈ ತಿಳಿವಳಿಕೆ ಯಡಿಯೂರಪ್ಪ ಅವರಿಗೆ ಇದ್ದರೆ ಸಾಕು ಎಂದು ಮುಖ್ಯಮಂತ್ರಿಯವರು ಹೇಳಿದರು.
ಜನಶಕ್ತಿಯನ್ನು ನಂಬಿ ರಾಜಕೀಯ ಮಾಡುವವರು ನಾವು. ರಾಜ್ಯದ ಜನರ ಆಶೀರ್ವಾದ ನಮ್ಮ ಮೇಲಿದೆ. ನಮ್ಮೊಂದಿಗೆ ಲಕ್ಷಾಂತರ ಕಾರ್ಯಕರ್ತರ ಪಡೆ ಇದೆ. ಹೀಗಾಗಿ ಎರಡೂ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಯಡಿಯೂರಪ್ಪ ಅವರು ಇತ್ತೀಚೆಗೆ ನನ್ನನ್ನು ಬೈಯ್ಯುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ನಾವು ಬಿಜೆಪಿ ಅಭ್ಯರ್ಥಿಗಳು, ಆ ಪಕ್ಷದ ನಾಯಕರನ್ನು ಬೈಯ್ಯುವುದಿಲ್ಲ. ಏಕೆಂದರೆ ನಮ್ಮ ರಾಜಕೀಯ ಸಂಸ್ಕೃತಿಯೇ ಬೇರೆ.
ಕಳೆದ 30 ವರ್ಷಗಳಿಂದ ನಾನು ರಾಜಕೀಯ ಮಾಡಿಕೊಂಡು ಬಂದಿದ್ದೇನೆ ಎಂದು ಯಡಿಯೂರಪ್ಪ ಅವರು ಹೋದ ಕಡೆ ಹೇಳುತ್ತಾರೆ. ಅವರ ಹೋರಾಟ ಎಂಥದ್ದು ಎಂಬುದನ್ನು ನಾನು ನೋಡಿದ್ದೇನೆ. ಸುಳ್ಳು ಹೇಳುವುದನ್ನು ಹೊರತುಪಡಿಸಿದರೆ ಯಾವ ಹೋರಾಟವನ್ನೂ ಅವರು ಮಾಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.

ಭ್ರಷ್ಟಾಚಾರಕ್ಕೆ ನಾಂದಿ ಹಾಡಿದ್ದೇ ಯಡಿಯೂರಪ್ಪ
ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ನಾಂದಿ ಹಾಡಿದ್ದೇ ಯಡಿಯೂರಪ್ಪ. ಅವರು ಮುಖ್ಯಮಂತ್ರಿಯಾಗಿದ್ದಾಗ ಆಪರೇಷನ್ ಕಮಲದ ಮೂಲಕ ಎಂಟು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವಂತೆ  ಮಾಡಿದರು. ಅಷ್ಟೇ ಅಲ್ಲ, ಚುನಾವಣೆ ಗೆಲ್ಲಲು ಪ್ರತಿ ಕ್ಷೇತ್ರಕ್ಕೆ 25 ಕೋಟಿ ರೂ. ಖರ್ಚು ಮಾಡಿದರು. ಈಗ ಅವರು ಚುನಾವಣಾ ಅಕ್ರಮದ ಬಗ್ಗೆ ಮಾತನಾಡುತ್ತಿರುವುದನ್ನು ಕೇಳಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತದೆ. ಇದು ನಾಚಿಕೆಗೇಡು. ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮಂತ್ರದಂಡ ಕರ್ನಾಟದಲ್ಲಿ ಕೆಲಸ ಮಾಡುವುದಿಲ್ಲ. ಉತ್ತರ ಪ್ರದೇಶದಲ್ಲಿ ಬೀಸಿದ ಬಿಜೆಪಿ ಗಾಳಿ ಇಲ್ಲಿಗೆ ತಲುಪುವುದೂ ಇಲ್ಲ. ಅದು ಅಲ್ಲಿಯೇ ನಿಂತಿದೆ ಎಂದರು.
ರೈತರ ಸಾಲ ಮನ್ನಾ ಕುರಿತು ಈಗ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿಯವರ ಬಳಿಗೆ ಹೋದಾಗ ಬಾಯಿಗೆ ಬೀಗ ಹಾಕಿಕೊಂಡಿದ್ದು ಏಕೆ ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು. ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿಯವರ ಕಚೇರಿಗೆ ಹೋಗಿದ್ದಾಗ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಅವರು ಬಾಯಿಯನ್ನೇ ಬಿಡಲಿಲ್ಲ. ಈಗ ಅವರು ಸಾಲ ಮನ್ನಾ ಕುರಿತು ಮಾತನಾಡುತ್ತಿರುವುದು ನಾಚಿಕೆಗೇಡು ಎಂದು ಸಿಎಂ ವ್ಯಂಗ್ಯವಾಡಿದರು.
ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್‍ಗಳ ಮೂಲಕ ನಮ್ಮ ರೈತರು 42 ಸಾವಿರ ಕೋಟಿ ರೂ. ಸಾಲ ಪಡೆದಿದ್ದಾರೆ. ಪ್ರಧಾನಿಯವರ ಮನವೊಲಿಸಿ ಆ ಸಾಲ ಮನ್ನಾ ಮಾಡಿಸುವ ಕೆಲಸವನ್ನು ಯಡಿಯೂರಪ್ಪ ಅವರು ಮೊದಲು ಮಾಡಲಿ. ಬಳಿಕ ನಾವು ಸಹಕಾರ ಬ್ಯಾಂಕ್‍ಗಳ ಮೂಲಕ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ಘೋಷಿಸಿದರು. ಹಸಿರು ಶಾಲು ಹೊದ್ದು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ನಾನು ರೈತರ ಪ್ರತಿನಿಧಿ ಎಂದು ಹೇಳಿಕೊಂಡರು. ಆದರೆ, ಅಧಿಕಾರ ಸ್ವೀಕಾರ ಮಾಡಿದ ಮೂರೇ ತಿಂಗಳಲ್ಲಿ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿಸಿ ಇಬ್ಬರ ಸಾವಿಗೆ ಕಾರಣರಾದರು. ಸಾಲ ಮನ್ನಾ ಮಾಡಲು ನನ್ನ ಬಳಿ ನೋಟು ಮುದ್ರಿಸುವ ಯಂತ್ರ ಇಲ್ಲ ಎಂದು ವಿಧಾನ ಪರಿಷತ್ತಿನಲ್ಲಿ ಹೇಳಿಕೆ ಕೊಟ್ಟವರು ಯಾರು. ಈಗ ರೈತರನ್ನು ದಾರಿ ತಪ್ಪಿಸಲು ಯಡಿಯೂರಪ್ಪ ಅವರು ಏನೇನೋ ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿಯವರು ಟೀಕಿಸಿದರು.

ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ, ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಆರ್.ವಿ. ದೇಶಪಾಂಡೆ, ತನ್ವೀರ್ ಸೇಠ್, ಸಂಸದ ಧ್ರುವನಾರಾಯಣ ಮತ್ತಿತರರು ಉಪಸ್ಥಿತರಿದ್ದರು. ( ಎಸ್.ಎನ್-ಎಸ್.ಎಚ್)

Leave a Reply

comments

Related Articles

error: