ಪ್ರಮುಖ ಸುದ್ದಿಮೈಸೂರು

ಕಾರಂತರು ದೊಡ್ಡ ಲೇಖಕರಷ್ಟೇ ಅಲ್ಲ, ದೊಡ್ಡ ವ್ಯಕ್ತಿ : ಸಾಹಿತಿ ಡಾ.ಎಸ್.ಎಲ್.ಭೈರಪ್ಪ

ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರಿಗೆ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ

ಮೈಸೂರು, ಅ.10:- ಸರಸ್ವತಿ ಸಮ್ಮಾನ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಸಾಹಿತಿಗಳಾದ ಡಾ. ಎಸ್.ಎಲ್.ಭೈರಪ್ಪ ಅವರಿಗೆ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರದಾನಿಸಿದರು.

ಮೈಸೂರಿನ ಪ್ರಮಥಿ ವಿದ್ಯಾಸಂಸ್ಥೆಯಲ್ಲಿ ಸಚಿವದ್ವಯರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಶಿವರಾಮ ಕಾರಂತರ ಪುತ್ಥಳಿಯನ್ನು ಸ್ಮರಣಿಕೆಯಾಗಿ ನೀಡಲಾಯಿತು.

ಬಳಿಕ ಮಾತನಾಡಿದ ಡಾ. ಎಸ್.ಎಲ್.ಭೈರಪ್ಪ ಮಾತನಾಡಿ, ಹುಟ್ಟೂರಿನವರು ಕಾರಂತರ ಜನ್ಮದಿನವನ್ನು ಆಚರಿಸುವ ಪರಿಪಾಠ ಬಹಳ ಒಳ್ಳೆಯದು. ಮುಂದಿನ ಪೀಳಿಗೆಗೂ ಇದು ವಿಸ್ತಾರವಾಗಲಿದೆ. ಕಾರಂತರು ದೊಡ್ಡ ಲೆಖಕರು ಹಾಗೂ ಕಾದಂಬರಿಕಾರರು. ಅವರು ಕಾದಂಬರಿಯನ್ನು ಬರೆಯಲು ಪ್ರಾರಂಭಿಸಿದ ಮೇಲೆ ಕಾದಂಬರಿಕಾರರ ಬರವಣಿಗೆಗಳಲ್ಲಿ ಸಾಕಷ್ಟು ಬದಲಾವಣಗಳಾದವು. ಕಾರಂತರದ್ದು ಮುಕ್ತವಾದ ಬರವಣಿಗೆಯಾಗಿದೆ. ಜೊತೆಗೆ ವಿಷಯಾಧಾರಿತ ಬರವಣಿಗೆ ಅವರದ್ದಾಗಿತ್ತು. ಯಾವುದೇ ತತ್ವಗಳಡಿ ಬರೆಯುವವರಲ್ಲ ಎಂದು ಹೇಳಿದರು.

ಕಾರಂತರು ಬರೀ ಕಾದಂಬರಿಕಾರರಾಗಿರದೆ ಯಕ್ಷಗಾನ, ಚಿತ್ರಕಲಾವಿದರಾಗಿದ್ದರು. ಅವರಿಗೆ ಎಲ್ಲ ಕ್ಷೇತ್ರದಲ್ಲೂ ಆಸಕ್ತಿ ಇತ್ತು. ಇನ್ನು ಅವರು ಎಷ್ಟು ದೊಡ್ಡ ಲೇಖಕರೋ ಅಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು. ಅವರು ಕಡುಬಡತನದಲ್ಲಿದ್ದವರು, ಅದರಲ್ಲೂ ವಿಧವೆಯವರಿಗೆ ಪ್ರತಿ ತಿಂಗಳೂ ಹಣ ಕಳಿಸುತ್ತಿದ್ದರು. ಹಾಗಂತ ಇದನ್ನು ಅವರು ಹೇಳೊಕೊಳ್ಳುತ್ತಲೂ ಇರಲಿಲ್ಲ ಎಂದು ಭೈರಪ್ಪ ಅವರು ತಿಳಿಸಿದರು.

ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ತುರ್ತುಪರಿಸ್ಥಿತಿಯನ್ನು ಘೋಷಣೆ ಮಾಡುತ್ತಿದ್ದಂತೆ ಪದ್ಮಭೂಷಣ ಪ್ರಶಸ್ತಿಯನ್ನು ವಾಪಸ್ ಕಳಿಸಿ, ನನಗೆ ಇಂಥ ಪ್ರಶಸ್ತಿಯನ್ನು ಕೊಡುವ ಯೋಗ್ಯತೆ ನಿಮ್ಮ ಸರ್ಕಾರಕ್ಕಿಲ್ಲ ಎಂದು ಷರಾ ಬರೆದಿದ್ದರು ಎಂದು ಭೈರಪ್ಪ ತಿಳಿಸಿದರು.

ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಡಲ ಭಾರ್ಗವ ಶಿವರಾಮ ಕಾರಂತ ಅವರು ಉಡುಪಿಯಲ್ಲಿ ಹುಟ್ಟಿರುವುದು ನಮ್ಮ ಹೆಮ್ಮೆ. ಲೋಕಸುಧಾರಣೆ ಮಾಡುವುದು ಸುಲಭವಲ್ಲ, ಲೋಕಸುಧಾರಣೆಗೆ ಮೊದಲು ನಾವು ಸುಧಾರಣೆಯಾಗಬೇಕು ಎಂದು ಕಾರಂತರು ಹೇಳುತ್ತಿದ್ದರು. ನಾವುಗಳು ಆ ನಿಟ್ಟಿನಲ್ಲಿ ಮುನ್ನಡೆಯಬೇಕು. ಶಿವರಾಮ ಕಾರಂತರಿಗೆ ಸರಿಸಾಟಿಯಾದ ಇನ್ನೊಬ್ಬ ಸಾಹಿತಿಗಳೆಂದರೆ ಅದು ಡಾ. ಭೇರಪ್ಪ ಅವರಾಗಿದ್ದು, ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಬೇಕು ಎಂದು ಹೇಳಿದರು.

ಏನಿದು ಪ್ರಶಸ್ತಿ ?
ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಹಾಗೂ ಕೋಟತಟ್ಟು ಗ್ರಾಮ ಪಂಚಾಯಿತಿ ವತಿಯಿಂದ ಕೊಡಲಾಗುವ ಪ್ರಶಸ್ತಿ ಇದಾಗಿದೆ.

ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ನಾಗೇಂದ್ರ, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ ಸೇರಿದಂತೆ ಹಲವು ಗಣ್ಯರು ಮತ್ತು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: