ಮೈಸೂರು

ಮುಂದೊಂದು ದಿನ ಬಹು ಜನರು ದೇಶವನ್ನಾಳಬೇಕೆಂಬ ಕನಸು ಕಂಡಿದ್ದವರು ಕಾನ್ಶಿರಾಮ್ : ಶಿವ ಮಹದೇವ

ಮೈಸೂರು,ಅ.11:- ಶೋಷಿತರಷ್ಟೇ ಅಲ್ಲ ಹಿಂದುಳಿದ ವರ್ಗಗಳು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಸಾಮಾಜಿಕ ಹಾಗೂ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡು, ಸಂಘಟಕರಾಗಿ ಜಾಗೃತರಾಗಬೇಕು ಎಂಬ ಆಕಾಂಕ್ಷೆಯನ್ನು ಹೊಂದಿದ್ದ ಕಾನ್ಸಿರಾಮ್ ಜೀ ಅವರು ಮುಂದೊಂದು ದಿನ ಬಹುಜನರು ದೇಶವನ್ನು ಆಳಬೇಕು ಎಂಬ ಕನಸನ್ನ ಕಂಡಿದ್ದರು ಎಂದು ಬಹುಜನ ಸಮಾಜ ಪಕ್ಷದ ವಿಭಾಗಿಯ ಉಸ್ತುವಾರಿ ಶಿವ ಮಹದೇವ ಹೇಳಿದರು.

ತಿ.ನರಸೀಪುರ ಪಟ್ಟಣದ ಶ್ರೀನಿವಾಸ ರಿಫ್ರೆಶ್ಮೆಂಟ್ ಸಭಾಂಗಣದಲ್ಲಿ ನಡೆದ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಸಿರಾಮ್ ಜೀ ಅವರ14ನೇ ವರ್ಷದ ಪುಣ್ಯಸ್ಮರಣೆ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶದಾದ್ಯಂತ ಬಹು ಸಂಖ್ಯೆಯಲ್ಲಿರುವ ಶೋಷಿತರು, ಹಿಂದುಳಿದ ವರ್ಗಗಳು ಹಾಗೂಧಾರ್ಮಿಕ ಅಲ್ಪಸಂಖ್ಯಾತರು ರಾಜಕೀಯವಾಗಿ ಸಂಘಟಿತರಾದರೆ ದೇಶದ ಜನರ ಚುಕ್ಕಾಣಿ ಹಿಡಿಯಲು ಸಾಧ್ಯ ಎಂದು ಕಾನ್ಸಿರಾಮ್ ಭವಿಷ್ಯ ನುಡಿದಿದ್ದರು ಎಂದರು.

ಸಾಮಾನ್ಯ ವ್ಯಕ್ತಿಯಾಗಿ ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷವನ್ನು ಸಂಘಟಿಸಿ, ಬಲವಾಗಿ ಕಟ್ಟಿದ ಕಾನ್ಸಿರಾಮ್ ಅವರು ನಾಲ್ಕು ಬಾರಿ ಮಾಯಾವತಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಕಾನ್ಸಿರಾಮ್ ಅವರು ಶಾರೀರಿಕವಾಗಿ ನಮ್ಮನ್ನ ಅಗಲಿದ್ದರೂ ಪಕ್ಷವನ್ನು ಸಂಘಟಿಸಲು ಪಟ್ಟಂತಹ ಶ್ರಮ, ಜನರಲ್ಲಿ ಮೂಡಿಸಿದ ರಾಜಕೀಯ ಜಾಗೃತಿ ಇಂದಿಗೂ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಅವರಂತೆಯೇ ಬಹುಜನ ಸಮಾಜ ಪಕ್ಷ ವನ್ನು ತಳಮಟ್ಟದಿಂದ ಬಲವಾಗಿ ಕಟ್ಟೋಣ ವೆಂದು ಕರೆ ನೀಡಿದರು.

ಜಿಲ್ಲಾಧ್ಯಕ್ಷ ಬಿ.ಆರ್.ಪುಟ್ಟಸ್ವಾಮಿ ಮಾತನಾಡಿ, ಬಹುಜನ ಸಮಾಜ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಪಕ್ಷವಾಗಿ ಗುರುತಿಸಿಕೊಳ್ಳಲು ಕಾನ್ಸಿರಾಮ್ ಜೀ ಅವರ ಪರಿಶ್ರಮದ ಕೊಡುಗೆಯಾಗಿದೆ. ಅವರ ಸೈದ್ಧಾಂತಿಕ ನಿಲುವುಗಳು ಹಾಗೂ ಬದ್ಧತೆ ಯ ಆಧಾರದ ಮೇಲೆ ಮಠದಲ್ಲಿ ಉತ್ಸವವನ್ನು ಬಲವಾಗಿ ಕಟ್ಟಬೇಕು. ಮುಂಬರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ವೇಳೆಗೆ ಪಕ್ಷದ ಪ್ರಾಬಲ್ಯವನ್ನು ವಿಸ್ತರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಮೈಸೂರು ನಗರ ಉಸ್ತುವಾರಿ ಜ್ಞಾನಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಯರಗನಹಳ್ಳಿ ಬಿ.ಮಹದೇವಸ್ವಾಮಿ, ಕ್ಷೇತ್ರಾಧ್ಯಕ್ಷ ಕುಕ್ಕೂರು ಪುಟ್ಟಣ್ಣ, ಉಪಾಧ್ಯಕ್ಷ ನಾಸಿರ್ ಹುಸೇನ್, ಪ್ರಧಾನ ಕಾರ್ಯದರ್ಶಿ ಪುಟ್ಟಮರುಡಯ್ಯ, ಕ್ಷೇತ್ರ ಉಸ್ತುವಾರಿ ಪುಟ್ಟಸ್ವಾಮಿ, ಕಾರ್ಯದರ್ಶಿ ಮಹೇಂದ್ರ ಕುಮಾರ್, ಖಜಾಂಚಿ ಪುಟ್ಟರಾಜು, ಕಚೇರಿ ಕಾರ್ಯದರ್ಶಿ ಹೊಸಪುರ ಲಿಂಗರಾಜು, ಮುಖಂಡರಾದ ಇಮ್ರಾನ್, ಕರೋಹಟ್ಟಿ ನಟರಾಜು, ಹಿರಿಯೂರು ಸಿದ್ದಶೆಟ್ಟಿ, ಬೆಟ್ಟಹಳ್ಳಿ ಮಹದೇವಸ್ವಾಮಿ ಹಾಗೂ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: