ಕರ್ನಾಟಕಪ್ರಮುಖ ಸುದ್ದಿ

ಸಚಿವ ಡಾ.ಸುಧಾಕರ್ ಹೆಗಲಿಗೆ ಆರೋಗ್ಯ ಖಾತೆ: ಶ್ರೀರಾಮುಲುಗೆ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ

ಬೆಂಗಳೂರು,ಅ.12- ಮಹತ್ವ ಬೆಳವಣಿಗೆಯಲ್ಲಿ ಸಚಿವ ಬಿ.ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರಿಗೆ ನೀಡಲಾಗಿದೆ. ಹೀಗಾಗಿ ಸುಧಾಕರ್ ಅವರು ಅವಳಿ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.

ಹೆಚ್ಚುತ್ತಿರುವ ಕೊರೊನಾ ನಿಯಂತ್ರಣದ ದೃಷ್ಟಿಯಿಂದ ಇಲಾಖೆಗಳ ನಡುವೆ ಸಮನ್ವಯಕ್ಕಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಆರೋಗ್ಯ ಮತ್ತು ವೈದ್ಯ ಶಿಕ್ಷಣ ಖಾತೆಯ ಜವಾಬ್ದಾರಿಯನ್ನು ಒಬ್ಬರಿಗೇ ವಹಿಸಿದ್ದಾರೆ.

ಶ್ರೀ ರಾಮುಲು ಅವರಿಗೆ ಪ್ರಮುಖವಾದ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ವಹಿಸಲಾಗಿದೆ. ಖಾತೆ ಹಂಚಿಕೆಯಲ್ಲಿನ ಸಣ್ಣ ಪ್ರಮಾಣದ ಬದಲಾವಣೆ ಇದಾಗಿದ್ದರೂ ಮುಂದಿನ ದಿನಗಳಲ್ಲಿ ಸಂಪುಟದಲ್ಲಿ ಮೇಜರ್‌ ಸರ್ಜರಿ ಕೈಗೊಳ್ಳಲು ಇದು ಮುನ್ನುಡಿ ಎನ್ನಲಾಗಿದೆ.

ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುಧಾಕರ್ ಅವರು, ಮೊದಲಿಗೆ ಸಿಎಂ ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಜನತೆಗೆ ಉತ್ತಮ ಆರೋಗ್ಯ ಕಲ್ಪಿಸಲು ಶಕ್ತಿ, ಯುಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ನಿನ್ನೆ ಸಂಜೆ ಬಿಎಸ್ವೈ ಅವರು, ವೈದ್ಯಕೀಯ ಶಿಕ್ಷಣ ಖಾತೆ ಜತೆಗೆ ಆರೋಗ್ಯ ಖಾತೆಯನ್ನೂ ವಹಿಸಿಕೊಂಡು ಸರಿಯಾಗಿ ಕೋವಿಡ್-19 ನಿಯಂತ್ರಿಸಿ ರಾಜ್ಯದ ಜನತೆಗೆ ಉತ್ತಮ ಆರೋಗ್ಯ ಭಾಗ್ಯ ಸಿಗುವಂತೆ ಕ್ರಾಂತಿಕಾರಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ ಎಂದರು.

ಪ್ರಾರಂಭದಲ್ಲಿ ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಮುಂಚೂಣಿಯಲ್ಲಿತ್ತು. ಕೇಂದ್ರ ಸರ್ಕಾರದಿಂದಲೂ ಪ್ರಶಂಸೆ ಸಿಕ್ಕತ್ತು. ಆದರೆ, ಲಾಕ್‌ಡೌನ್‌ ನಂತರದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಆರೋಗ್ಯ ಹಾಗೂ ವೈದ್ಯ ಶಿಕ್ಷಣ ಇಲಾಖೆ ನಡುವಿನ ಸಮನ್ವಯದ ಕೊರತೆಯೇ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಎರಡೂ ಇಲಾಖೆಯನ್ನು ಒಬ್ಬ ಸಚಿವರ ಸುಪರ್ದಿಗೆ ವಹಿಸಬೇಕು. ಆರೋಗ್ಯ ಕ್ಷೇತ್ರದಲ್ಲಿ ತಜ್ಞತೆ ಹೊಂದಿದವರಿಗೇ ಈ ಹೊಣೆ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಹಾಗಾಗಿ ವೃತ್ತಿಯಿಂದ ವೈದ್ಯರೂ ಆಗಿರುವ ವೈದ್ಯ ಶಿಕ್ಷಣ ಸಚಿವ ಸುಧಾಕರ್‌ ಅವರಿಗೆ ಆರೋಗ್ಯ ಇಲಾಖೆಯ ಉಸ್ತುವಾರಿಯನ್ನೂ ಸಿಎಂ ನೀಡಿದ್ದಾರೆ. ಈ ಸಂಬಂಧ ರಾಜಭವನದ ಕಡೆಯಿಂದ ಅಧಿಕೃತ ಅಧಿಸೂಚನೆ ಹೊರಬೀಳುವುದು ಬಾಕಿಯಿದೆ.

ಇನ್ನು ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿಯನ್ನು ವಹಿಸಲಾಗಿದೆ. ಈಗಾಗಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶ್ರೀರಾಮುಲು ಬಳಿಯಿದ್ದು, ಇದರ ಜೊತೆಗೆ ಸಮಾಜ ಕಲ್ಯಾಣ ಇಲಾಖೆಯೂ ದೊರಕುವುದರಿಂದ ರಾಮುಲು ಅವರಿಗೂ ಪ್ರಮೋಷನ್‌ ಸಿಕ್ಕಂತಾಗಲಿದೆ. ಈಗ ಡಿಸಿಎಂ ಗೋವಿಂದ ಕಾರಜೋಳ ಬಳಿ ಲೋಕೋಪಯೋಗಿ ಇಲಾಖೆ ಮಾತ್ರ ಉಳಿದಂತಾಗಲಿದೆ. ಕಾರಜೋಳ ಅವರಿಗೆ ಅನ್ಯ ಇಲಾಖೆಯ ಹೆಚ್ಚುವರಿ ಹೊಣೆ ನೀಡುವ ನಿರೀಕ್ಷೆ ಇದೆ. (ಎಂ.ಎನ್)

Leave a Reply

comments

Related Articles

error: