ದೇಶಪ್ರಮುಖ ಸುದ್ದಿ

ಕಾಂಗ್ರೆಸ್ ತೊರೆದ ನಟಿ ಖುಷ್ಬೂ: ಇಂದು ಬಿಜೆಪಿ ಸೇರುವ ಸಾಧ್ಯತೆ

ನವದೆಹಲಿ,ಅ.12-ನಟಿ, ರಾಜಕಾರಣಿ ಖುಷ್ಬೂ ಸುಂದರ್‌ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದು, ಇಂದು ಬಿಜೆಪಿ ಸೇರುವ ಸಾಧ್ಯತೆಯಿದೆ.

ಖುಷ್ಬೂ ಸೋಮವಾರ ಬಿಜೆಪಿಗೆ ಸೇರುವ ಸಾಧ್ಯತೆ ಇರುವುದಾಗಿ ವರದಿಯಾದ ಬೆನ್ನಲ್ಲೇ ಕಾಂಗ್ರೆಸ್‌ನ ಎಲ್ಲ ಸ್ಥಾನಗಳಿಗೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಭಾನುವಾರ ಸಂಜೆ ಖುಷ್ಬೂ ತಮಿಳುನಾಡಿನಿಂದ ದೆಹಲಿ ತಲುಪಿದ್ದಾರೆ. ಎಐಸಿಸಿ ವಕ್ತಾರ ಸ್ಥಾನದಿಂದ ಖುಷ್ಬೂ ಅವರನ್ನು ಕೈಬಿಡಲಾಗಿದೆ. ಆದೇಶವು ತಕ್ಷಣದಿಂದಲೇ ಅನ್ವಯವಾಗಲಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಖುಷ್ಬೂ, ಪಕ್ಷದಲ್ಲಿ ವಾಸ್ತವದ ಸಂಪರ್ಕ ಇಲ್ಲದವರು ಅಥವಾ ಸಾರ್ವಜನಿಕವಾಗಿ ಗುರುತಿಸಿಕೊಳ್ಳದ ವ್ಯಕ್ತಿಗಳು ನಿಯಂತ್ರಣ ಹೇರುತ್ತಿದ್ದಾರೆ… ಎಂದಿದ್ದಾರೆ. ಈ ಮೂಲಕ ಆರು ವರ್ಷಗಳ ಕಾಂಗ್ರೆಸ್ ಜೊತೆಗಿನ ನಂಟು ಮುರಿದುಕೊಂಡಿದ್ದಾರೆ.

2010ರಲ್ಲಿ ಖುಷ್ಬೂ ಡಿಎಂಕೆ ಸೇರ್ಪಡೆಯಾಗಿದ್ದರು. ಆಗ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿತ್ತು. ಆದರೆ, 2014ರಲ್ಲಿ ಡಿಎಂಕೆ ತೊರೆದ ಅವರು ಸೋನಿಯಾ ಗಾಂಧಿ ಜೊತೆಗಿನ ಭೇಟಿ ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 2019ರ ಲೋಕಸಭಾ ಚುನಾವಣೆಯ ಡಿಎಂಕೆ-ಕಾಂಗ್ರೆಸ್‌ ಮೈತ್ರಿಯಲ್ಲಿ ಖುಷ್ಬೂ ಅವರಿಗೆ ಟಿಕೆಟ್‌ ಸಿಗಲಿಲ್ಲ, ಅಲ್ಲದೇ ರಾಜ್ಯಸಭೆಗೂ ಆಯ್ಕೆ ಮಾಡಲಿಲ್ಲ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಸಮ್ಮುಖದಲ್ಲಿ ಖಷ್ಬೂ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಅವರೊಂದಿಗೆ ತಮಿಳುನಾಡಿನ ಐಆರ್‌ಎಸ್‌ ಅಧಿಕಾರಿ ಹಾಗೂ ಯುಟ್ಯೂಬರ್‌ ಸಹ ಬಿಜೆಪಿಗೆ ಸೇರಲಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್‌.ಮುರುಗನ್‌ ಶನಿವಾರದಿಂದಲೂ ನವದೆಹಲಿಯಲ್ಲೇ ಇದ್ದಾರೆ.

ಮುಂಬೈನ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ಖುಷ್ಬೂ ಚಿಕ್ಕಂದಿನಿಂದಲೂ ನಟನೆಯಲ್ಲಿ ತೊಡಗಿಸಿಕೊಂಡವರು. 90ರ ದಶಕದಲ್ಲಿ ತಮಿಳುನಾಡಿನ ಅತ್ಯಂತ ಜನಪ್ರಿಯ ಸ್ಟಾರ್‌ ನಟಿಯರಲ್ಲಿ ಖುಷ್ಬೂ ಸಹ ಒಬ್ಬರಾಗಿದ್ದರು. ಆ ಸಮಯದಲ್ಲಿ ಅಭಿಮಾನಿಗಳು ಅವರಿಗಾಗಿಯೇ ದೇವಾಲಯವನ್ನೂ ಕಟ್ಟಿದ್ದರು. ನಂತರದಲ್ಲಿ ಅವರು ಟಿವಿ ಧಾರಾವಾಹಿಗಳಲ್ಲಿ ನಟಿಸಿದರು ಹಾಗೂ ಟಿವಿ ನಿರೂಪಣೆಗಳನ್ನು ನಡೆಸಿದ್ದಾರೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: