ಮೈಸೂರು

ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾ : ಆರೋಗ್ಯಹೀನ ವ್ಯಕ್ತಿ ಸಾಧನೆ ಮಾಡಲು ಸಾಧ್ಯವಿಲ್ಲ : ಶಿವಶಂಕರ್

ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಮೈಸೂರು ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಜಿಲ್ಲಾ ಆರೋಗ್ಯ ಕಚೇರಿ ಬಳಿ ಜಾಥಾಕ್ಕೆ ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಆರೋಗ್ಯ ಸರಿಯಿಲ್ಲದ ವ್ಯಕ್ತಿ ಯಾವುದೇ ಸಾಧನೆಗಳನ್ನು ಮಾಡಲು ಸಾಧ್ಯವಿಲ್ಲ.  2017ನೇ ವಿಶ್ವ ಆರೋಗ್ಯ ದಿನಾಚರಣೆಯ ವಿಷಯವು ಖಿನ್ನತೆ/ ಬೇಜಾರು ಖಾಯಿಲೆ-ನಾವು ಮಾತಾಡೋಣ ಎಂಬುದಾಗಿದೆ. ಇದು ಒಂದು ಪ್ರಮುಖ ಮಾನಸಿಕ ಖಾಯಿಲೆಯಾಗಿದ್ದು, ಕನಿಷ್ಠ ವಾರಗಳ ನಿರಂತರ ದುಃಖ ಹಾಗೂ ಸಾಮಾನ್ಯ ಸಂತೋಷಪಡುವ ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿಯ ಜೊತೆಗೆ ದಿನನಿತ್ಯದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಆಗದೇ ಇರುವ ಲಕ್ಷಣಗಳನ್ನು ಹೊಂದಿದೆ ಎಂದರು. ವ್ಯಕ್ತಿಯಲ್ಲಿನ ಖಿನ್ನತೆಯನ್ನು ಹೋಗಲಾಡಿಸಲು ಒಂದು ಚಿಕ್ಕ ಪ್ರಯತ್ನ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಬಸವರಾಜ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಈ ಕುರಿತು ಚಿಕಿತ್ಸೆಯ ಅಗತ್ಯವಿದೆ. ಖಿನ್ನತೆ ಇರುವಂಥಹ ವ್ಯಕ್ತಿಗಳಲ್ಲಿ ನಿಶ್ಯಕ್ತಿ, ಹಸಿವಿನಲ್ಲಿ ಬದಲಾವಣೆ, ಅತಿ ಕಡಿಮೆ, ಅತಿ ಹೆಚ್ಚು ನಿದ್ರೆ ಮಾಡುವುದು, ಆತಂಕ, ಏಕಾಗ್ರತೆಯ ಕೊರತೆ, ಅನಿರ್ಧಾರತೆ, ಚಡಪಡಿಕೆ, ಆಶಾರಹಿತ, ನಿಷ್ಪ್ರಯೋಜಕ ಅಥವಾ ತಪ್ಪಿತಸ್ಥ ಮನೋಭಾವ, ಆತ್ಮ ಹತ್ಯೆ ಆಲೋಚನೆಯಂತಹ ಲಕ್ಷಣಗಳು ಕಂಡು ಬರುತ್ತವೆ. ಇದು ಅತಿ ಸಾಮಾನ್ಯ ಖಾಯಿಲೆಯಾಗಿದ್ದು, ಪ್ರಪಂಚದ ಎಲ್ಲಾ ದೇಶಗಳ, ಎಲ್ಲಾ ಸ್ಥರಗಳ ಹಾಗೂ ಎಲ್ಲಾ ವಯಸ್ಸಿನ ವ್ಯಕ್ತಿಗಳನ್ನು ಬಾಧಿಸಬಹುದು ಎಂದರು. ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ. ಆಪ್ತಸಮಾಲೋಚನೆ ನಡೆಸುವ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಜಾಥಾದಲ್ಲಿ  ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮೈಸೂರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಖಿನ್ನತೆ ಕುರಿತು ಜಾಗೃತಿ ಮೂಡಿಸಿದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: