ಪ್ರಮುಖ ಸುದ್ದಿಮೈಸೂರು

ದಸರಾ ಉದ್ಘಾಟನೆ ನನ್ನೊಬ್ಬನಿಗೆ ಸಿಕ್ಕ ಗೌರವ ಅಲ್ಲ, ಇಡೀ ವೈದ್ಯ ಸಮುದಾಯಕ್ಕೆ ಸಿಕ್ಕ ಮಾನ್ಯತೆ : ಡಾ.ಸಿ.ಎನ್.ಮಂಜುನಾಥ್

ಮೈಸೂರು/ಬೆಂಗಳೂರು, ಅ.12:- 2020 ರ ನಾಡಹಬ್ಬ ಮೈಸೂರು ದಸರಾ ಉದ್ಘಾಟಕರನ್ನಾಗಿ ಖ್ಯಾತ ಹೃದ್ರೋಗ ತಜ್ಞ ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಜಯದೇವ ಆಸ್ಪತ್ರೆಯ ನಿರ್ದೇಶಕರ ಕಚೇರಿಯಲ್ಲಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ. ಸೋಮಶೇಖರ್, ಸಂಸದರಾದ ಪ್ರತಾಪ್ ಸಿಂಹ, ಮೈಸೂರು ಮೇಯರ್ ತಸ್ನೀಂ ಅಧಿಕೃತ ಆಮಂತ್ರಣವನ್ನು ನೀಡಿ ಆಹ್ವಾನಿಸಿದರು. ಕುಟುಂಬ ಸಮೇತ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸುವಂತೆ ಡಾ. ಮಂಜುನಾಥ್ ಅವರಿಗೆ ಸಚಿವರು ಆಹ್ವಾನ ನೀಡಿದರು.
ವೈದ್ಯ ಸಮುದಾಯಕ್ಕೆ ಸಿಕ್ಕ ಮಾನ್ಯತೆ
ದಸರಾ ಉದ್ಘಾಟನೆಗೆ ಪ್ರಪ್ರಥಮ ಬಾರಿಗೆ ಕೊರೋನಾ ವಾರಿಯರ್ಸ್ ಆದ ವೈದ್ಯರೊಬ್ಬರನ್ನು ಆಹ್ವಾನಿಸಲಾಗುತ್ತಿದೆ. ಫ್ರಂಟ್ ಲೈನ್ ವಾರಿಯರ್ಸ್ ಗಳಿಗೆ ಸಿಕ್ಕ ಗೌರವ ಇದಾಗಿದೆ. ಇದರಿಂದ ನನಗೆ ತುಂಬಾ ಸಂತಸವಾಗುತ್ತಿದೆ. ಇದು ನನ್ನೊಬ್ಬನಿಗೆ ಸಿಕ್ಕ ಗೌರವ ಅಲ್ಲ. ಇಡೀ ವೈದ್ಯ ಸಮುದಾಯಕ್ಕೆ ಸಿಕ್ಕ ಮಾನ್ಯತೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರಾದ ಸೋಮಶೇಖರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಾ. ಸಿ.ಎನ್. ಮಂಜುನಾಥ್ ಸುದ್ದಿಗಾರರಿಗೆ ತಿಳಿಸಿದರು.
ಕೊರೋನಾ ವಿಷಯದಲ್ಲಿ ನಿರ್ಲಕ್ಷ್ಯ ಬೇಡ
ದಸರಾ ಸೇರಿದಂತೆ ನಾಡಿನ ಜನತೆ ಎಲ್ಲ ಕಡೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಮ್ಮ ಹತ್ತಿರ ನಿಖರ ಔಷಧಗಳು ಇಲ್ಲ. ಹೀಗಾಗಿ ಕೊರೋನಾ ಜೊತೆಯಲ್ಲೇ ನಾವಿರಬೇಕಾದ್ದರಿಂದ ಯಾವುದೇ ನಿರ್ಲಕ್ಷ್ಯ ಬೇಡ ಎಂದು ಕರೆ ನೀಡಿದರು.
ಮುಖ್ಯಮಂತ್ರಿಗಳಿಗೆ ಧನ್ಯವಾದ
ನನ್ನನ್ನು ದಸರಾ ಉದ್ಘಾಟನೆಗಾಗಿ ಆಯ್ಕೆ ಮಾಡಿದ್ದಕ್ಕೆ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ನನ್ನ ಆಯ್ಕೆ ಬಗ್ಗೆ ನನಗೆ ತುಂಬಾ ಸಂತಸವಾಗುತ್ತಿದೆ ಎಂದು ತಿಳಿಸಿದರು.
ದಸರಾ ಅನುಭವ ಹಂಚಿಕೊಂಡ ಡಾ. ಮಂಜುನಾಥ್
ಪಿಯುಸಿ, ಎಂಡಿ ಸೇರಿದಂತೆ ಶಿಕ್ಷಣದ ಹಲವು ಘಟ್ಟಗಳನ್ನು ಮೈಸೂರಿನಲ್ಲಿ ಕಂಡಿದ್ದೇನೆ. ಆಗೆಲ್ಲ ದಸರಾವನ್ನು ಸಂಭ್ರಮದಿಂದ ನೋಡುತ್ತಿದ್ದೆ. ಕಳೆದ ಎರಡು ವರ್ಷದ ಹಿಂದೆಯೂ ಸಹ ಸ್ನೇಹಿತರೊಡನೆ ಬಂದು ದಸರಾ ವೀಕ್ಷಣೆ ಮಾಡಿದ್ದೆ. ಆದರೆ ಈಗ ನಾನೇ ಉದ್ಘಾಟನೆಗೆ ಆಗಮಿಸುತ್ತಿರುವುದು ಖುಷಿ ತಂದಿದೆ. ಜಂಬೂಸವಾರಿ, ಮೈಸೂರು ಅರಮನೆ, ಚಾಮುಂಡಿ ಬೆಟ್ಟದಿಂದ ನಿಂತು ಲೈಟಿಂಗ್ಸ್ ನೋಡವುದೇ ಒಂದು ಆನಂದ ಎಂದು ಡಾ. ಮಂಜುನಾಥ್ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.
ಸಚಿವರಿಂದ ಆಮಂತ್ರಣ
ಬಳಿಕ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ದಸರಾ ಹೈಪರ್ ಕಮಿಟಿಯಲ್ಲಿ ಮೊದಲಿಗೆ 6 ಮಂದಿ ಕೊರೋನಾ ವಾರಿಯರ್ಸ್ ಗಳಿಂದ ಉದ್ಘಾಟನೆ ಮಾಡಿಸುವುದು ಎಂಬ ತೀರ್ಮಾನವಾಗಿತ್ತು. ಬಳಿಕ ಒಬ್ಬರಿಂದ ಉದ್ಘಾಟಿಸಿ ಉಳಿದವರಿಗೆ ಸನ್ಮಾನಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಅಂತಿಮವಾಗಿ ಮುಖ್ಯಮಂತ್ರಿಗಳು ಡಾ. ಮಂಜುನಾಥ್ ಅವರನ್ನು ಆಯ್ಕೆಮಾಡಿದ್ದಾಗಿ ದೂರವಾಣಿ ಕರೆ ಮಾಡಿ ನನಗೆ ತಿಳಿಸಿದರು. ಹೀಗಾಗಿ ನಾನು ಡಾ. ಮಂಜುನಾಥ್ ಅವರಿಗೆ ಕರೆ ಮಾಡಿದ್ದಲ್ಲದೆ, ಮಾಧ್ಯಮದ ಮುಖಾಂತರ ಮೈಸೂರಿನಲ್ಲಿಯೇ ಹೆಸರು ಘೋಷಣೆ ಮಾಡಿದೆ ಎಂದು ಮಾಹಿತಿ ನೀಡಿದರು.
ಇದೀಗ ಡಾ. ಮಂಜುನಾಥ್ ಅವರಿಗೆ ಅಧಿಕೃತ ಆಹ್ವಾನವನ್ನು ನೀಡುವ ಸಂಬಂಧ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಅವರಿಗೆ ಆಮಂತ್ರಣ ಪತ್ರವನ್ನು ನೀಡಿ ಕುಟುಂಬ ಸಮೇತ ಆಗಿಮಿಸಿ ಉದ್ಘಾಟನೆಯನ್ನು ನೆರವೇರಿಸಿಕೊಡಬೇಕೆಂದು ಆಹ್ವಾನಿಸಿದ್ದೇವೆ ಎಂದು ತಿಳಿಸಿದರು.
ಕಡ್ಡಾಯವಾಗಿ ಮಾಸ್ಕ್ ಧರಿಸಿ
ಈ ಬಾರಿ ಕೋವಿಡ್ 19 ರ ಹಿನ್ನೆಲೆಯಲ್ಲಿ ಸರಳ, ಸಾಂಪ್ರದಾಯಿಕ ದಸರಾಕ್ಕೆ ಮಾತ್ರ ಒತ್ತು ಕೊಡುತ್ತಿದ್ದು, ಚಾಮುಂಡಿ ಬೆಟ್ಟದಲ್ಲಿನ ಕಾರ್ಯಕ್ರಮಕ್ಕೆ 200 ಮಂದಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಮಂದಿ ಹಾಗೂ ಜಂಬೂ ಸವಾರಿಗೆ 300 ಜನರಿಗೆ ಮಾತ್ರ ಅವಕಾಶ ಕಲ್ಪಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮದವರು ಹಾಗೂ ಸಾರ್ವಜನಿಕರಿಗೆ ಎಷ್ಟು ಪ್ರಮಾಣದಲ್ಲಿ ಪ್ರವೇಶಕ್ಕೆ ಅನುಮತಿ ನೀಡಬೇಕೆಂಬುದನ್ನು ಜಿಲ್ಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ ಸಚಿವರಾದ ಸೋಮಶೇಖರ್ ಅವರು, ಸಾರ್ವಜನಿಕರು ಸೇರಿದಂತೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: