
ದೇಶಪ್ರಮುಖ ಸುದ್ದಿ
ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಸ್ಥಳಕ್ಕೆ ಭೇಟಿ ನೀಡಿದ ಸಿಬಿಐ ತಂಡ
ನವದೆಹಲಿ,ಅ.13-ಹತ್ರಾಸ್ ನಲ್ಲಿ ದಲಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದ ಸ್ಥಳಕ್ಕೆ ಇಂದು ಸಿಬಿಐ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿತು.
ಕೃತ್ಯ ನಡೆದು ಒಂದು ತಿಂಗಳ ನಂತರ ಸಿಬಿಐನ ನಾಲ್ವರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತೆಯ ಸಹೋದರನನ್ನು ಭೇಟಿ ಮಾಡಿದ್ದ ತಂಡ ಕೃತ್ಯ ನಡೆದ ಸ್ಥಳ ತೋರಿಸಲು ಸೂಚಿಸಿತು. ಅಲ್ಲದೆ, ಆ ಸ್ಥಳದ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸ್ಥಳೀಯ ಪೊಲೀಸರಿಗೂ ಸೂಚಿಸಿತು.
ಅಪರಾಧದ ಕೃತ್ಯದ ಚಿತ್ರಣದ ಮರುಸೃಷ್ಟಿಗೆ ಅನುವಾಗುವಂತೆ ಕೇಂದ್ರ ತಂಡದ ಅಧಿಕಾರಿಗಳು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಜೊತೆಗೆ ಮತ್ತೊಮ್ಮೆ ಭೇಟಿ ನೀಡುವ ಸಂಭವವಿದೆ.
ಸೆಪ್ಟೆಂಬರ್ 29ರಂದು ಕೃತ್ಯ ನಡೆದಿದ್ದು, ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಮಹಿಳೆ ಬಳಿಕ ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪ್ರಕರಣ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿದ್ದು, ಉತ್ತರಪ್ರದೇಶ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದೆ. (ಏಜೆನ್ಸೀಸ್, ಎಂ.ಎನ್)