ದೇಶಪ್ರಮುಖ ಸುದ್ದಿ

ಅ.17 ರಿಂದ `ಏಕತಾ ಪ್ರತಿಮೆ’ ವೀಕ್ಷಣೆಗೆ ಸಾರ್ವಜನಿಕರಿಗೆ ಮತ್ತೆ ಅವಕಾಶ

ಅಹಮದಾಬಾದ್,ಅ.14-ವಿಶ್ವದ ಅತಿ ಎತ್ತರದ ಪ್ರತಿಮೆಗಳ ಸಾಲಿನಲ್ಲಿರುವ ದೇಶದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರ `ಏಕತಾ ಪ್ರತಿಮೆ’ಯ ವೀಕ್ಷಣೆಗೆ ಅಕ್ಟೋಬರ್ 17 ರಿಂದ ಸಾರ್ವಜನಿಕರಿಗೆ ಮತ್ತೆ ಅವಕಾಶ ನೀಡಲಾಗುತ್ತಿದೆ

ಆರು ತಿಂಗಳಿಗಿಂತ ಅಧಿಕ ವಿರಾಮದ ನಂತರ ನವರಾತ್ರಿ ಪ್ರಾರಂಭದ ಶುಭದಿನದಂದು ಏಕತಾ ಪ್ರತಿಮೆಯ ವೀಕ್ಷಣೆಗೆ ಮತ್ತೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ರಾಷ್ಟ್ರೀಯ ಏಕತೆ ದಿನಾಚರಣೆಯಾದ ಅಕ್ಟೋಬರ್ 31 ರಂದು ಪ್ರಧಾನಿ ನರೇಂದ್ರ ಮೋದಿ ಈ ಸ್ಥಳಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ.

ದೇಶದ ಪ್ರಮುಖ ಪ್ರವಾಸಿ ಆಕರ್ಷಣೆಯಾದ ಏಕತಾ ಪ್ರತಿಮೆ ಮತ್ತೆ ತೆರೆಯುವ ನಿರ್ಧಾರದ ಭಾಗವಾಗಿ, ಸರ್ದಾರ್ ಸರೋವರ್ ನರ್ಮದಾ ನಿಗಮ್ ಲಿಮಿಟೆಡ್ (ಎಸ್‌ಎಸ್‌ಎನ್‌ಎನ್‌ಎಲ್) ಈ ಪ್ರಕಟಣೆ ಹೊರಡಿಸಿದೆ.

ಕೋವಿಡ್ ನಿಯಮಗಳನ್ನು ಅನುಸರಿಸಲು ಒಂದು ದಿನಕ್ಕೆ ಗರಿಷ್ಠ 2,500 ಪ್ರವಾಸಿಗರಿಗೆ ಮಾತ್ರ ಪ್ರತಿಮೆ ವೀಕ್ಷಣೆಗೆ ಅವಕಾಶ ಒದಗಿಸಲಾಗುತ್ತಿದೆ. ಅದರಲ್ಲಿಯೂ ಒಮ್ಮೆಗೆ ಕೇವಲ 500 ಮಂದಿಗೆ ಮಾತ್ರ 193 ಮೀಟರ್ ಎತ್ತರದಲ್ಲಿರುವ ವೀಕ್ಷಣಾ ಗ್ಯಾಲರಿಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ.

ಅಧಿಕಾರಿಗಳು ಈಗಾಗಲೇ ಕೆವಾಡಿಯಾ ತಾಣದಲ್ಲಿ ಜಂಗಲ್ ಸಫಾರಿ, ಮಕ್ಕಳ ಉದ್ಯಾನ, ಏಕತಾ ಮಾಲ್ ಮತ್ತು ಇತರ ಪ್ರವಾಸಿ ಆಕರ್ಷಣೆ ತಾಣವನ್ನು ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿಸಿದ್ದಾರೆ. ಅಲ್ಲದೆ ಇಲ್ಲಿಗೆ ಬರುವ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಧಿಕೃತ ಟಿಕೆಟಿಂಗ್ ವೆಬ್‌ಸೈಟ್ www.soutickets.in ನಿಂದ ಎರಡು ಗಂಟೆಗಳ ಸ್ಲಾಟ್‌ಗಳಲ್ಲಿ ಟಿಕೆಟ್‌ ಗಳನ್ನು ಬುಕ್ ಮಾಡಬಹುದಾಗಿದೆ. ಇದರ ಹೊರತಾಗಿ ಪ್ರವಾಸಿ ತಾಣದಲ್ಲಿ ಇರುವ ಟಿಕೆಟ್ ಕೌಂಟರ್ ಯಾವ ಟಿಕೆಟ್ ಗಳನ್ನು ನೀಡಲಾಗುವುದಿಲ್ಲ. ಮಾಸ್ಕ್ ಧರಿಸುವುದು, ಕೈ ನೈರ್ಮಲ್ಯ ಮತ್ತು ದೈಹಿಕ ದೂರವನ್ನು ಕಾಪಾಡಿಕೊಳ್ಳುವುದು ಮುಂತಾದ ಎಲ್ಲಾ ಮೂಲ ಕೋವಿಡ್ ಪ್ರೋಟೋಕಾಲ್‌ಗಳನ್ನು ಸಂದರ್ಶಕರು ಅನುಸರಿಸುವುದು ಕಡ್ಡಾಯವಾಗಿದೆ. (ಏಜೆನ್ಸೀಸ್, ಎಂ.ಎನ್)

 

 

Leave a Reply

comments

Related Articles

error: