ಮೈಸೂರು

ಕೊಳಗೇರಿ ನಿವಾಸಿಗಳ ನಿವೇಶನಗಳ ಹಕ್ಕುಪತ್ರಕ್ಕೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಅ.14:- ಕುಂಬಾರಕೊಪ್ಪಲು, ಪಿಕೆಟಿಬಿ ಸ್ಯಾನಿಟೋರಿಯಂ ಹಿಂಭಾಗದ ಕೊಳಗೇರಿ ನಿವಾಸಿಗಳ ನಿವೇಶನಗಳ ಹಕ್ಕುಪತ್ರಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮೈಸೂರು ಜಿಲ್ಲಾ ಶಾಖೆ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 5ರಲ್ಲಿನ ಸುಮಾರು ಒಂದು ಎಕರೆ ವಿಸ್ತೀರ್ಣದಲ್ಲಿ ಸುಮಾರು 50ವರ್ಷಗಳಿಂದ ನೂರಾರು ಹಿಂದುಳಿದ ತಳಸಮುದಾಯಗಳ ಕುಟುಂಬಗಳು ಈ ಪ್ರದೇಶದಲ್ಲಿ ವಾಸಿಸುತ್ತಿವೆ. ಕೊಳಗೇರಿ ಅಭಿವೃದ್ಧಿ ಮಂಡಳಿ ಈ ಪ್ರದೇಶವನ್ನು ಅಧಿಸೂಚಿ ಸಂಖ್ಯೆ ಕ.ಕೊ.ಅ.ಮಂ16/2000, 9/8/2001ರ ಆದೇಶದಂತೆ ಕೊಳಚೆ ಪ್ರದೇಶವೆಂದು ಘೋಷಿಸಿ ಸ್ಥಳೀಯ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಿರುತ್ತದೆ. ಮೈಸೂರು ಮಹಾನಗರ ಪಾಲಿಕೆಯು ವಿವಿಧ ಅನುದಾನಗಳಲ್ಲಿ ಮನೆಗಳನ್ನು ನಿರ್ಮಿಸಿ ಕೊಟ್ಟಿರುತ್ತದೆ. ಇಷ್ಟೇ ಅಲ್ಲದೆ ಸ್ಥಳೀಯರು ಮೈಸೂರು ಮಹಾನಗರ ಪಾಲಿಕೆಗೆ ಕಾಲಕಾಲಕ್ಕೆ ನಿವೇಶನದ ಕಂದಾಯವನ್ನು ಪಾವತಿಸುತ್ತಿದ್ದಾರೆ. ಇಷ್ಟಾದರೂ ತಲತಲಾಂತರದಿಂದ ವಾಸ ಮಾಡುವ ಭೂಮಿಯ ಮೇಲೆ ಯಾವುದೇ ಹಕ್ಕು ಬಾಧ್ಯತೆಗಳನ್ನು ಹೊಂದಿಲ್ಲವೆಂಬ ಆತಂಕದಿಂದಲೇ ಇಲ್ಲಿನ ಜನರು ಬದುಕುತ್ತಿದ್ದಾರೆ. ಅಂಗೈಅಗಲ ಜಾಗಕ್ಕಾಗಿ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಮಹಾನಗರ ಪಾಲಿಕೆಗೆ ಅಲೆಯುವಂತೆ ಆಗಿದೆ. ಸರ್ಕಾರದ ಕೆರೆಕುಂಟೆ ಸಾರ್ವಜನಿಕ ಆಸ್ತಿ ರಸ್ತೆ ಎನ್ನದೆ ನೂರಾರು, ಸಾವಿರಾರು ಎಕರೆಗಟ್ಟಲೆ ಭೂ ಪ್ರದೇಶಗಳನ್ನು ಬಂಡವಾಳಶಾಹಿಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದಾಖಲೆ ಮಾಡಿಕೊಡುವ ಸರ್ಕಾರ ಅಧಿಕಾರಿಗಳು ಹಾಗೂ ಸರ್ಕಾರಿ ಭೂಮಿಗಳನ್ನು ಅತಿಕ್ರಮಿಸಿಕೊಂಡು ಮಾಲುಗಳನ್ನು ನಿರ್ಮಿಸಿಕೊಂಡಿರುವವರಿಗೆ ಅಗತ್ಯ ದಾಖಲೆ ಪತ್ರಗಳನ್ನು ಒದಗಿಸುವ ಪಾಲಿಕೆ ರವೆನ್ಯೂ ಅಧಿಕಾರಿಗಳು ತಮ್ಮ ಉಳಿವಿಗಾಗಿ ಬದುಕು ಕಟ್ಟಿಕೊಂಡು ತಲೆಮಾರುಗಳ ಕಾಲ ವಾಸಮಾಡಿಕೊಂಡು ಕಳೆದ 20ವರ್ಷಗಳಿಂದ ಸತತವಾಗಿ ಹಕ್ಕುಪತ್ರಗಳಿಗಾಗಿ ಬೇಡಿಕೆ ಇಟ್ಟು ಒತ್ತಾಯಿಸುತ್ತಲೇ ಬಂದಿರುವ ಇಲ್ಲಿನ ನಿವಾಸಿಗಳನ್ನು ನಿರ್ಲಕ್ಷ್ಯಿಸುತ್ತಿದ್ದಾರೆಂದು ಆರೋಪಿಸಿದರು.
ಮೈಸೂರು ಪಿಕೆಟಿಬಿ ಸ್ಯಾನಿಟೋರಿಯಂ ಹಿಂಭಾಗದ ಸ್ಲಮ್ ನಿವಾಸಿ ಕುಟುಂಬಗಳಿಗೆ ಕೂಡಲೇ ನಿವೇಶನಗಳ ಹಕ್ಕುಪತ್ರ ನೀಡಬೇಕು. ಸ್ಲಮ್ ನಿವಾಸಿ ಗುರುತು ಪತ್ರ ಹೊಂದಿರುವ ಎಲ್ಲಾ ಕುಟುಂಬಗಳ ಅರ್ಹರಿಗೆ ಬಿಪಿಎಲ್ ಪಡಿತರ ಚೀಟಿ, ವೃದ್ಧಾಪ್ಯ ವೇತನ, ವಿಧವಾ ವೇತನ ಮಂಜೂರು ಮಾಡಬೇಕು. ನಗರ ಪಾಲಿಕೆಯಿಂದ ನಿವಾಸಿಗಳಿಗೆ ಕಳಪಡೆ ಸೋಲಾರ್ ದೀಪ ನೀಡಿ ವಂಚಿಸಿರುವ ಪಾಲಿಕೆಯ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗಸ್ವಾಮಿ, ರತ್ನಪುರಿ ಪುಟ್ಟಸ್ವಾಮಿ, ಜಗದೀಶ್ ಕೆ, ಗಂಗಾಧರ್, ಸಿದ್ಧರಾಜು, ರಾಜು ಸೋಮಣ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: