
ಮೈಸೂರು
ಕುಶಾಲತೋಪು ಸಿಡಿಸುವ ಅಣುಕು ತಾಲೀಮು
ಮೈಸೂರು,ಅ.14:- ದಸರಾ ಮಹೋತ್ಸವದ ಜಂಬೂ ಸವಾರಿ ದಿನದಂದು ಕುಶಾಲತೋಪು ಸಿಡಿಸಿ ಗೌರವ ಸೂಚಿಸುವ ಕಾರ್ಯ ರಾಜರ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದ್ದು, ಇಂದು ಫಿರಂಗಿಗಳ ಮೂಲಕ ಕುಶಾಲತೋಪು ಸಿಡಿಸುವ ಅಣುಕು ತಾಲೀಮು ಪ್ರಾರಂಭಿಸಲಾಯಿತು.
ಮೆರವಣಿಗೆ ದಿನದಂದು 21 ಬಾರಿ ಕುಶಾಲತೋಪು ಸಿಡಿಸಿ ದಸರಾ ಮಹೋತ್ಸವಕ್ಕೆ ಗೌರವ ಸಲ್ಲಿಸಲಿದ್ದು, ನಗರ ಶಸಸ್ತ್ರ ಮೀಸಲು ಪಡೆಯ ಪೊಲೀಸರು ಇಂದಿನ ಈ ತಾಲೀಮಿನಲ್ಲಿ ಭಾಗಿಯಾಗಿದ್ದಾರೆ.
ಆನೆಗಳು ಹಾಗೂ ಅಶ್ವಾರೋಹಿ ಪಡೆ ಕುಶಾಲತೋಪಿನ ಸದ್ದಿಗೆ ಬೆಚ್ಚದಿರಲಿ ಎಂಬ ಕಾರಣಕ್ಕೆ ದಸರಾ ಪ್ರಾರಂಭಕ್ಕೆ ಮುನ್ನ ತಾಲೀಮು ನಡೆಸಲಾಗುವುದು. ಅರಮನೆ ಆವರಣದಲ್ಲಿ ಇಂದು ಕೇವಲ ಅಣುಕು ತಾಲೀಮು ನಡೆಸಲಾಗಿದ್ದು, ಸದ್ಯದಲ್ಲೇ ಗಜಪಡೆ ಮತ್ತು ಕುದುರೆಗಳ ಸಮ್ಮುಖದಲ್ಲಿ ಕುಶಾಲತೋಪು ಸಿಡಿಸುವ ತಾಲೀಮು ನಡೆಯಲಿದೆ. (ಕೆ.ಎಸ್,ಎಸ್.ಎಚ್)