ಮೈಸೂರು

ಉಪ ಚುನಾವಣೆಯಲ್ಲಿ ನಾಯಕ ಸಮುದಾಯದಿಂದ  ನೋಟಾ ಚಲಾವಣೆಯ ಎಚ್ಚರಿಕೆ

ನಾಯಕ ಸಮುದಾಯ ಇತರೆ ಪಂಗಡಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವ ಕೂಗಿಗೆ ಸರ್ಕಾರ ಜಾಣ ಮೌನ ವಹಿಸಿರುವುದು ಖಂಡನೀಯ. ಈ ನಿಟ್ಟಿನಲ್ಲಿ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಸಾಮೂಹಿಕ ಚಲಾವಣೆ(ನೋಟಾ) ಚಳುವಳಿಯನ್ನು ನಡೆಸಲಾಗುವುದು  ಎಂದು ಪಾಳೇಗಾರ ಮಾರನಾಯಕ ಸಂಘದ ಜಿ.ಎನ್.ದೇವದತ್ತ ಎಚ್ಚರಿಕೆ ನೀಡಿದ್ದಾರೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಉಪಚುನಾವಣೆಯಲ್ಲಿ ಏ.9ರಂದು ನೋಟಾ ನಡೆಸುವುದಾಗಿ ತಿಳಿಸಿದ ಅವರು, ಸಮುದಾಯಕ್ಕೆ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಬೇಕು ಹಾಗು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕಳೆದ ಮೂರು ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯತೋರಿದೆ. ಅಲ್ಲದೇ ಸರ್ಕಾರದ ಜಾತಿ ದೃಢೀಕರಣ ಪತ್ರದಲ್ಲಿಯೂ ಹಲವಾರು ಗೊಂದಲಗಳಿವೆ ಎಂದ ಅವರು,  ಪ್ರಸ್ತುತ ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆಯಲ್ಲಿ  ನಾಯಕ ಸಮುದಾಯದ ಮತ ಸೆಳೆಯಲು ಆಯಾ ಪಕ್ಷದ ನಾಯಕರುಗಳು ರಾಜಕೀಯ ಮೇಲಾಟ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಹಾಗೂ ಆಡಳಿತಾರೂಢ ಕಾಂಗ್ರೆಸ್‍ನಿಂದ ಸತೀಶ್ ಜಾರಕಿಹೊಳಿ ಹಾಗೂ ಬಿಜೆಪಿಯಿಂದ ಶ್ರೀರಾಮುಲು ಬಿರುಸಿನ ಚುನಾವಣಾ ಪ್ರಚಾರ ನಡೆಸಿ ಜಾತಿ ಮತಗಳನ್ನು ಒಡೆಯುವ ಪ್ರಯತ್ನ ನಡೆಸುತ್ತಿದ್ದಾರೆ, ಅವರುಗಳಿಗೆ ಸ್ಥಳೀಯತೆ ಬಗ್ಗೆ ಅರಿವಿಲ್ಲವೆಂದ ದೂರಿದರು.  ನಮ್ಮ ನೋವುಗಳಿಗೆ ಸ್ಪಂದಿಸುವ ವ್ಯಕ್ತಿಗೆ ಮತ ಚಲಾಯಿಸಬೇಕೆಂದು ಕೋರಿದರು.

ಅಧ್ಯಕ್ಷ ರಂಜುಕುಮಾರ್ ಹುಣಸೂರು, ಕಾರ್ಯಾಧ್ಯಕ್ಷ ಟಿ.ಎನ್.ಜಯಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ನಾರಾಯಣ ಬದನಗುಪ್ಪೆ, ಜಿಲ್ಲಾಧ್ಯಕ್ಷ ಬೋಗಾದಿ ಮಹೇಶ್ ಹಾಗೂ ಜಿ.ಎಸ್.ನಾಯಕ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ಕೆ.ಎಂ.ಆರ್-ಎಸ್.ಎಚ್)

Leave a Reply

comments

Related Articles

error: