ಮೈಸೂರು

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸವಾಲುಗಳೇ ಹೆಚ್ಚು: ಕೆ. ಶಿವಕುಮಾರ್

ಮಾನಸಗಂಗೋತ್ರಿ : ಮೈಸೂರು ವಿಶ್ವವಿದ್ಯಾನಿಲಯ ಸಾಮರ್ಥ್ಯವರ್ಧಿತ ಉತ್ಕೃಷ್ಠಜ್ಞಾನ ಸಂಶೋಧನಾ ಯೋಜನೆ ಮತ್ತು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸ್ಮಾರ್ಟ್ ಸಭಾಂಗಣದಲ್ಲಿ  ಸೆ.29 ರ ಬೆ.10.30 ಕ್ಕೆ  ‘ಕೃತಿ ಕುರಿತ ಮಾಧ್ಯಮ ಸಂವಾದ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಶಸ್ತಿ ವಿಜೇತ ಹಳೆಯ ವಿದ್ಯಾರ್ಥಿ ಪತ್ರಕರ್ತರಾದ ಆಲ್ಫ್ರೆಡ್ ಸೋಲೋಮನ್ ಮತ್ತು ರವಿ ಪಾಂಡವಪುರ ಇವರಿಗೆ ಸುಗತ ಶ್ರೀನಿವಾಸರಾಜು ಸನ್ಮಾನ ಮಾಡಿದರು.

ಬಹುಮಾಧ್ಯಮ ಪ್ರಯೋಗಾಲಯದ ಉದ್ಘಾಟನೆ ಮಾಡಿದ ಇಂಡಿಯನ್ ಎಕ್ಸ್ ಪ್ರೆಸ್ ಕಾರ್ಯಾಲಯದ ಮುಖ್ಯಸ್ಥರಾದ ಕೆ.ಶಿವಕುಮಾರ್ ಮಾತನಾಡಿ, “ಪತ್ರಿಕೋದ್ಯಮ ಕ್ಷೇತ್ರ ಹೂವಿನ ಹಾದಿಯಲ್ಲ. ಇಲ್ಲಿ ಸವಾಲುಗಳು ಹೆಚ್ಚಾಗಿರುತ್ತವೆ. ಒಬ್ಬ ಯಶಸ್ವಿ ಪತ್ರಕರ್ತನಾಗಬೇಕಾದರೆ ತನ್ನದೇ ಆದ ಒಂದು ಚೌಕಟ್ಟನ್ನು ನಿರ್ಮಿಸಿಕೊಳ್ಳಬೇಕು. ಇಂದು ಜಾಗತೀಕರಣ ಮತ್ತು ಮಾರುಕಟ್ಟೆಯ ನಡುವಿನ ತಿಕ್ಕಾಟದಲ್ಲಿ ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿ ಪತ್ರಕರ್ತರಿಗೆ ಬಂದೊದಗಿದೆ. ಇವೆರಡರ ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯವಾದ ವಿಚಾರವಾಗಿದೆ. ಉತ್ತಮ ಪತ್ರಕರ್ತರನ್ನು ಸಿದ್ಧಗೊಳಿಸುತ್ತಿರುವ ಈ ಪತ್ರಿಕೋದ್ಯಮ ವಿಭಾಗಕ್ಕೆ  ಅಭಿನಂದನೆಗಳು. ಪತ್ರಿಕೋದ್ಯಮಕ್ಕೆ ಸೂಕ್ತ ಪಠ್ಯಕ್ರಮ ನೀಡಲು ರಾಜ್ಯದ ಎಲ್ಲಾ ವೃತ್ತ ಪತ್ರಿಕೆಗಳ ಸಂಪಾದಕರು ಮತ್ತು ವಿದ್ಯಾರ್ಥಿಗಳ ನಡುವೆ ಎರಡು ದಿನಗಳ ಕಾಲ ಸಂವಹನವನ್ನು ನಡೆಸಿ, ನಂತರ ಪರಿವಿಡಿಯನ್ನು ಬದಲಾಯಿಸಲಾಗುವುದು” ಎಂದು ಹೇಳಿದರು.

ಕನ್ನಡಪ್ರಭ ದ ಪ್ರಧಾನ ಸಂಪಾದಕರಾದ ಸುಗತ ಶ್ರೀನಿವಾಸರಾಜು ಅವರು ಮಾತನಾಡಿ, “ಕನ್ನಡ ಭಾಷೆಯಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಠಿ ಮಾಡಲು ನಾನು ಆಂಗ್ಲ ಪತ್ರಿಕೆಯನ್ನು ತೊರೆದು ಕನ್ನಡ ಪತ್ರಿಕೆಗೆ ಪ್ರವೇಶ ಮಾಡಿದೆ. ಆ ಸಂದರ್ಭದಲ್ಲಿ ಕನ್ನಡ ಭಾಷೆಯ ಬೌದ್ಧಿಕ ವಲಯ ಬೇರೆಯೇ ಆಗಿತ್ತು. ಬರವಣಿಗೆಯ ಮೂಲಕ ಕನ್ನಡದಲ್ಲಿ ಹೊಸ ದಿಗಂತವನ್ನು ಮೂಡಿಸುವುದು ಅಗತ್ಯವಾಗಿತ್ತು. ಇಂದು ಕನ್ನಡ ಭಾಷೆಯ ವಾತಾವರಣ ತುಂಬಾ ಸಂಕುಚಿತವಾಗಿದೆ. ವಿಶಾಲ ದೃಷ್ಠಿಕೋನ ಮತ್ತು ಲೋಕದೃಷ್ಠಿ ಕನ್ನಡ ಭಾಷೆಯಲ್ಲಿ ಕಾಣಿಸುತ್ತಿಲ್ಲ. ಕನ್ನಡವನ್ನು ಕ್ರಿಯಾಶೀಲವನ್ನಾಗಿಸಬೇಕು. ಸಂಸ್ಕೃತಿಯನ್ನು ಉಳಿಸಬೇಕು. ಇದಕ್ಕಾಗಿ ಕ್ರಾಂತಿ ಮಾಡಬೇಕು” ಎಂದು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರಾದ  ಡಾ. ಪೃಥ್ವಿ ದತ್ತ ಚಂದ್ರಶೋಭಿ ಅವರು ಜಾಗತೀಕರಣ ಮತ್ತು ಅಭಿವೃದ್ಧಿ : ಮಾನವ ಆಕಾಂಕ್ಷೆಗಳು ವಿಷಯದ ಬಗ್ಗೆ ಕನ್ನಡಪ್ರಭದ ಪ್ರಧಾನ ಸಂಪಾದಕರಾದ ಸುಗತ ಶ್ರೀನಿವಾಸರಾಜು ಅವರು ಬರೆದಿರುವ ಜೆರೆಮಿ ಸೀಬ್ರೂಕ್ ರ ಲೇಖನಗಳ ಆಧಾರಿತ  “ಸ್ವರ್ಗಕ್ಕೆ ಮೂರೇ ಮೈಲಿ” ಕೃತಿ ಕುರಿತು ಮಾತನಾಡಿದರು. “ನಮ್ಮ ಸಮಾಜದ ವರ್ತಮಾನವನ್ನು ಗ್ರಹಿಸಿ ಜನರ ಮುಂದಿಡುವ ಕಾರ್ಯ ನಮ್ಮ  ಮೇಲಿದೆ. ಸೂಕ್ಷ್ಮಗಳನ್ನು ಗ್ರಹಿಸಿ ಬೌದ್ಧಿಕ ಸಿದ್ಧತೆಗಳನ್ನು ಮಾಡಿಕೊಳ್ಳದೇ ಹೋದರೆ ದೊಡ್ಡ ಬಿಕ್ಕಟ್ಟು ಉಂಟಾಗುತ್ತದೆ. ಇದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯುತ ಹೊಣೆಯಾಗಿದೆ. ಕನ್ನಡ ಭಾಷೆಯ ಮೇಲೆ ಅಭಿಮಾನವಿರಲಿ. ಆದರೆ ಬೇರೆ ಭಾಷೆಗಳನ್ನು ತಿಳಿದುಕೊಂಡು ವಿಶಾಲವಾದ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ” ಎಂದು ಹೇಳಿದರು.

ಕೃತಿ ಬಗ್ಗೆ : ಜಗತ್ತನ್ನು ಗ್ರಹಿಸುವ ಶಕ್ತಿ , ಜಾಗತೀಕರಣದಿಂದಾಗಿ ಭಾರತವು ಕಳೆದ 25 ವರ್ಷಗಳಿಂದ ಬದಲಾಗಿದೆ. ಉದಾರೀಕರಣದ ಪ್ರಭಾವದಿಂದಾಗಿ ನಮ್ಮ ಚಿಂತನೆಗಳು, ಆದರ್ಶಗಳಲ್ಲಿ ಬದಲಾವಣೆಯಾಗಿದೆ. ಅಭಿವೃದ್ಧಿ, ಪರಿಕಲ್ಪನೆ, ಲಕ್ಷಣಗಳು, ನಮ್ಮ ಐತಿಹಾಸಿಕ ಅನುಭವಗಳು, ಜಾಗತಿಕ ವಿದ್ಯಮಾನಗಳು, ಬೇರೆ ದೇಶಗಳಲ್ಲಿ ಆಗುತ್ತಿರುವ ಬದಲಾವಣೆಗಳು ಇವು ಒಂದು ಕಡೆಯಾದರೆ, 150 ವರ್ಷಗಳ ಇತಿಹಾಸ ಹೊಂದಿರುವ ಆರ್ಥಿಕ ಅಭಿವೃದ್ಧಿಯ ಬಗ್ಗೆ ಕಳೆದ 25 ವರ್ಷಗಳಿಂದ ಚರ್ಚೆ ನಡೆಯುತ್ತಿದ್ದು, ಕೈಗಾರೀಕರಣ, ಬಂಡವಾಳ ಹೂಡಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದು ಕಂಡು ಬಂದಿದೆ.

ಗ್ರಾಮಗಳಲ್ಲಿ ಜನರು ತಮ್ಮ ಮನೆಯಲ್ಲಿ ಘನತೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗದೇ, ಬಹುದೂರ ಸಾಗಿ ಭದ್ರತೆ ಮತ್ತು ಘನತೆ ಎರಡೂ ಇಲ್ಲದ ಬದುಕನ್ನು ಕಟ್ಟಿಕೊಳ್ಳುತ್ತಿರುವುದು ವಾಸ್ತವದಲ್ಲಿದೆ. ಸಾಂಪ್ರದಾಯಿಕ ಪಿತೃ ಪ್ರಧಾನ ಸಮಾಜದಿಂದ ಹೊರಬರಲು ಈ ಕೆಲಸ ನಡೆಯುತ್ತಿರುವಾಗ ಇದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ವೈರುಧ್ಯಗಳನ್ನು ನಿವಾರಿಸಿಕೊಳ್ಳಬೇಕಾದರೆ ವಾಸ್ತವತೆಯನ್ನು ಅರಿಯಬೇಕು. ವೈರುಧ್ಯಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಅರ್ಥವ್ಯವಸ್ಥೆಯ ಲಾಭ ಯಾರಿಗೆ ದಕ್ಕಿದೆ ಎಂಬುದನ್ನು ತಿಳಿಯಬೇಕು. ಈ ಲಾಭದ ಪಾಲು ಇಂದು ಶೇ. 54 ರಷ್ಟು ಶ್ರೀಮಂತರದ್ದಾಗಿದೆ. ಅಭಿವೃದ್ಧಿಯ ಪರ್ವದಲ್ಲಿ ಅಸಮಾನತೆ ಹೆಚ್ಚಾಗುತ್ತಿರುವುದನ್ನು ಕಾಣಬಹುದಾಗಿದೆ. ಅವಕಾಶಗಳ ಸೃಷ್ಠಿ, ಹಂಚಿಕೆ  ಇವುಗಳ ಮೂಲಕ ಘನತೆ ಮತ್ತು ಭದ್ರತೆಯ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕೆಂಬ ಪ್ರಶ್ನೆಗೆ ಉತ್ತರವಿಲ್ಲ. ಇಂತಹ ಪ್ರಶ್ನೆಗಳಿಗೆ ಜೆರೆಮಿ ಸೀಬ್ರೂಕ್ ರ ಲೇಖನಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಸಿ.ಕೆ.ಪುಟ್ಟಸ್ವಾಮಿ, ಪ್ರಾಧ್ಯಾಪಕರಾದ ಪ್ರೊ. ಉಷಾರಾಣಿ, ಪ್ರೊ.ಮಹೇಶ್ ಚಂದ್ರಗುರು ಮತ್ತಿತರರು ಹಾಜರಿದ್ದರು.

 

 

Leave a Reply

comments

Related Articles

error: