ಪ್ರಮುಖ ಸುದ್ದಿ

ಭಾರತದಲ್ಲಿ 63 ಸಾವಿರ ಹೊಸ ಕೊರೋನಾ ಪ್ರಕರಣ : 70 ಸಾವಿರ ಮಂದಿ ಗುಣಮುಖ

ದೇಶ(ನವದೆಹಲಿ)ಅ.16:- ಭಾರತದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಬಹಳ ವೇಗವಾಗಿ ಹೆಚ್ಚಾಗುತ್ತಿದ್ದರೂ, ವಾಸ್ತವದಲ್ಲಿ ಸೋಂಕಿನ ಪರಿಣಾಮವೂ ಕಡಿಮೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 63,371 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದ್ದರೆ, 70,338 ರೋಗಿಗಳು ಗುಣಮುಖರಾಗಿದ್ದಾರೆ. ಆದರೆ 895 ರೋಗಿಗಳು ತಮ್ಮ ಪ್ರಾಣವನ್ನೂ ಕಳೆದುಕೊಂಡಿದ್ದಾರೆ.
ಜಗತ್ತಿನಲ್ಲಿ ಇಲ್ಲಿಯವರೆಗೆ, ಪ್ರತಿದಿನ ಗರಿಷ್ಠ ಕೊರೋನಾ ಪ್ರಕರಣಗಳು ಭಾರತದಲ್ಲಿ ಕಂಡು ಬರುತ್ತಿದ್ದವು. ಆದರೆ ಬಹಳ ಸಮಯದ ನಂತರ, ಅಮೆರಿಕಕ್ಕಿಂತ ಭಾರತದಲ್ಲಿ ಕಡಿಮೆ ಪ್ರಕರಣಗಳು ಕಂಡುಬಂದಿವೆ. ಯುಎಸ್ ನಲ್ಲಿ ಕಳೆದ 24 ಗಂಟೆಗಳಲ್ಲಿ 66,129 ಪ್ರಕರಣಗಳು ವರದಿಯಾಗಿವೆ ಮತ್ತು 874 ಸಾವು ಸಂಭವಿಸಿವೆ.
ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 73 ಲಕ್ಷ 70 ಸಾವಿರ ದಾಟಿದೆ. ಈ ಪೈಕಿ ಒಂದು ಲಕ್ಷ 12 ಸಾವಿರ 161 ರೋಗಿಗಳು ಸಾವನ್ನಪ್ಪಿದ್ದಾರೆ. ಅದೇ ವೇಳೆ ಚೇತರಿಕೆ ಕಂಡವರ ಸಂಖ್ಯೆ 64 ಲಕ್ಷ 53 ಸಾವಿರವನ್ನು ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷ 4 ಸಾವಿರಕ್ಕೆ ಇಳಿದಿದೆ. ಚೇತರಿಸಿಕೊಂಡ ಜನರ ಸಂಖ್ಯೆ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆಗಿಂತ ಆರು ಪಟ್ಟು ಹೆಚ್ಚಾಗಿದೆ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಅತಿ ಹೆಚ್ಚು ಶೇಕಡಾವಾರು ಸಕ್ರಿಯ ಪ್ರಕರಣಗಳು, ಮರಣ ಮತ್ತು ಕೊರೋನಾ ವೈರಸ್ನ ಚೇತರಿಕೆ ಪ್ರಮಾಣವಿದೆ.
ಐಸಿಎಂಆರ್ ಪ್ರಕಾರ, ಅಕ್ಟೋಬರ್ 15 ರವರೆಗೆ ಒಟ್ಟು 92.22 ಮಿಲಿಯನ್ ಕೊರೋನಾ ವೈರಸ್ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 10,28,622 ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಗಿದೆ. ಸಕಾರಾತ್ಮಕ ದರವು ಏಳು ಪ್ರತಿಶತದಷ್ಟಿದೆ.
ಮರಣ ಪ್ರಮಾಣ ಮತ್ತು ಸಕ್ರಿಯ ಪ್ರಕರಣಗಳ ದರದಲ್ಲಿ ಸ್ಥಿರವಾದ ಕುಸಿತ ದಾಖಲಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ. ಸಾವಿನ ಪ್ರಮಾಣ 1.52% ಕ್ಕೆ ಇಳಿದಿದೆ. ಇದಲ್ಲದೆ, ಚಿಕಿತ್ಸೆಗೆ ಒಳಪಡುವ ಸಕ್ರಿಯ ಪ್ರಕರಣಗಳ ಪ್ರಮಾಣವೂ 11% ಕ್ಕೆ ಇಳಿದಿದೆ. ಇದರೊಂದಿಗೆ, ಚೇತರಿಕೆ ದರ 87% ರಷ್ಟಿದೆ. ಭಾರತದಲ್ಲಿ ಚೇತರಿಕೆ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: