ದೇಶಪ್ರಮುಖ ಸುದ್ದಿ

ಆಹಾರ ಮತ್ತು ಕೃಷಿ ಸಂಸ್ಥೆಯ ವಜ್ರಮಹೋತ್ಸವ: 75 ರೂ.ನ ನಾಣ್ಯ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ

ನವದೆಹಲಿ,ಅ.16-ಆಹಾರ ಮತ್ತು ಕೃಷಿ ಸಂಸ್ಥೆ(ಎಫ್‌ಎಒ)ಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು 75 ರೂ. ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದರು.

ಇಂದು ವಿಶ್ವ ಆಹಾರ ದಿನದ ಹಿನ್ನೆಲೆಯಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಾಣ್ಯವನ್ನು ಬಿಡುಗಡೆ ಮಾಡಿದರಲ್ಲದೆ, ಇತ್ತೀಚೆಗೆ ಅಭಿವೃದ್ಧಿಪಡಿಸಿದ ಜೈವಿಕ ವೈವಿಧ್ಯದ 8 ಪ್ರಬೇಧಗಳನ್ನು ದೇಶಕ್ಕೆ ಸಮರ್ಪಿಸಿದರು.

ಕೃಷಿ ಮತ್ತು ಪೋಷಣೆಗೆ ಸರ್ಕಾರವು ನೀಡಿದ ಹೆಚ್ಚಿನ ಆದ್ಯತೆಯನ್ನು ಇದು ಸೂಚಿಸುತ್ತದೆ. ಹಸಿವು, ಅಪೌಷ್ಟಿಕತೆ ಮತ್ತು ಅಪೌಷ್ಟಿಕತೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಸಂಕಲ್ಪದ ಸಾಕ್ಷಿ ಇಂದಿನ ಕಾರ್ಯಕ್ರಮವಾಗಿದೆ.

ಆಹಾರ ಮತ್ತು ಕೃಷಿ ಸಂಸ್ಥೆಯ ಪಯಣ ಸಮಾಜದ ಕೆಳಸ್ತರದವರು ಸಹ ಆರ್ಥಿಕವಾಗಿ ಬಲಿಷ್ಠವಾಗಬೇಕು, ಪೌಷ್ಟಿಕಯುಕ್ತ ಆಹಾರ ಸೇವಿಸಬೇಕು, ಹಸಿವಿನಿಂದ ಯಾರೂ ಬಳಲಬಾರದು ಎಂಬುದಾಗಿದೆ. ಭಾರತೀಯ ನಾಗರಿಕ ಸೇವಾ ಅಧಿಕಾರಿ ಡಾ. ಬಿನಯ್ ರಂಜನ್ ಸೇನ್ 1956-57ರಲ್ಲಿ ಎಫ್‌ಎಒದ ಮಹಾ ನಿರ್ದೇಶಕರಾಗಿದ್ದರು. ಪ್ರಸಕ್ತ ವರ್ಷ ನೊಬೆಲ್ ಶಾಂತಿ ಪುರಸ್ಕಾರ ಪಡೆದ ವಿಶ್ವ ಆಹಾರ ಕಾರ್ಯಕ್ರಮವನ್ನು ಅವರ ಸಮಯದಲ್ಲಿಯೇ ಆರಂಭಿಸಲಾಯಿತು. 2016ರಲ್ಲಿ ಅಂತಾರಾಷ್ಟ್ರೀಯ ಧಾನ್ಯಗಳ ವರ್ಷ ಮತ್ತು 2023ರಲ್ಲಿ ಅಂತಾರಾಷ್ಟ್ರೀಯ ನವಣೆ ವರ್ಷ ಎಂದು ಆಚರಿಸಬೇಕೆಂದು ಭಾರತ ಮಾಡಿರುವ ಪ್ರಸ್ತಾವನೆ ಹಿಂದೆ ಎಫ್‌ಎಒದ ಪಾತ್ರ ಸಾಕಷ್ಟಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ ಅವರು, ಹೆಣ್ಮಕ್ಕಳು ಮದುವೆಯಾಗುವುದಕ್ಕೆ ಇರುವ ಕನಿಷ್ಠ ವಯಸ್ಸು ಎಷ್ಟಿರಬೇಕು ಎಂಬ ಬಗ್ಗೆ ಸರ್ಕಾರ ಶೀಘ್ರವೇ ನಿರ್ಣಯ ತೆಗೆದುಕೊಳ್ಳಲಿದೆ. ಮದುವೆಯಾಗುವುದಕ್ಕೆ ಹೆಣ್ಮಕ್ಕಳ ಕನಿಷ್ಠ ವಯಸ್ಸು ಎಷ್ಟಿರಬೇಕು ಎಂಬುದನ್ನು ಅಧ್ಯಯನ ಮಾಡಿ ಶಿಫಾರಸು ಮಾಡಲು ಸಮಿತಿಯೊಂಧನ್ನು ರಚಿಸಲಾಗಿದೆ. ಅದು ನೀಡುವ ಶಿಫಾರಸಿನ ಮೇರೆಗೆ ಸರ್ಕಾರ ನಿರ್ಣಯ ತೆಗೆದುಕೊಳ್ಳಲಿದೆ. ಇದೇ ರೀತಿ, ಕಳೆದ ಆರು ವರ್ಷಗಳ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೆಣ್ಮಕ್ಕಳ ನೋಂದಣಿ ಹುಡುಗರ ನೋಂದಣಿಗಿಂತ ಇದೇ ಮೊದಲ ಬಾರಿಗೆ ಹಚ್ಚಳವಾಗಿದೆ. ಇದಕ್ಕಾಗಿ ಸರ್ಕಾರ ಅನೇಕ ಪ್ರಯತ್ನಗಳನ್ನು ಮಾಡಿತ್ತು ಎಂದು ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ದಿನದ ಭಾಷಣದಲ್ಲಿ ಹುಡುಗಿಯರ ಮದುವೆಯ ವಯಸ್ಸು ಏರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದರು. ಪ್ರಸ್ತುತ ಮದುವೆ ಆಗೋದಕ್ಕೆ ಮಹಿಳೆಯರಿಗೆ ಕನಿಷ್ಠ ವಯಸ್ಸು 18 ಆದರೆ, ಪುರುಷರಿಗೆ ಕನಿಷ್ಠ 21 ವರ್ಷ ವಯಸ್ಸು ಆಗಿರಬೇಕು. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: