ಮೈಸೂರು

ನಾಳೆಯಿಂದ ಮೈಸೂರು ರಾಜವಂಶಸ್ಥರ ದರ್ಬಾರ್ ಆರಂಭ

ಮೈಸೂರು,ಅ,16:- ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ದಸರಾ ಮಹೋತ್ಸವ ನಾಳೆಯಿಂದ ಆರಂಭವಾಗಲಿದೆ. ನಾಳೆಯೇ ಕಂಕಣಧಾರಿಗಳಾಗುವ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಿಂಹಾಸನಾರೋಹಣ ಮಾಡುವ ಮೂಲಕ ಖಾಸಗಿ ದರ್ಬಾರ್ ಗೆ ಚಾಲನೆ ಸಿಗಲಿದೆ.
ಕೊರೋನಾ ಆತಂಕ ಇರುವ ಕಾರಣ ಸರ್ಕಾರ ನಡೆಸುವ ದಸರಾದಂತೆ ಮೈಸೂರು ರಾಜವಂಶಸ್ಥರು ನಡೆಸುವ ದಸರಾ ಕೂಡ ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆಯಲಿದೆ. ನಾಳೆ ಬೆಳಿಗ್ಗೆ ಕಂಕಣಧಾರಿಗಳಾಗುವ ಯದುವೀರ್ ಅವರು ಹೋಮ ಹವನದಲ್ಲಿ ಭಾಗಿಯಾಗಲಿದ್ದಾರೆ. ತರುವಾಯ ನಾಳೆ ಬೆಳಿಗ್ಗೆ 7 ಗಂಟೆ 45 ನಿಮಿಷದಿಂದ 8 ಗಂಟೆ 15 ನಿಮಿಷದೊಳಗೆ ಸಲ್ಲುವ ಶುಭ ಲಗ್ನದಲ್ಲಿ ಯದುವೀರ್ ಅವರು ಸಿಂಹಾಸನಾರೋಹಣ ಮಾಡಲಿದ್ದಾರೆ. ಈ ಮೂಲಕ ನಾಳೆಯಿಂದ 9 ದಿನಗಳ ಕಾಲ ಖಾಸಗಿ ದರ್ಬಾರ್ ನಡೆಲಿದೆ.
ಕೊರೋನಾ ಇರುವ ಕಾರಣ ಕೇವಲ ಬೆರಳಣಿಕೆಯಷ್ಟು ಜನರಿಗೆ ಮಾತ್ರ ಅರಮನೆಯೊಳಗೆ ಪ್ರವೇಶವಿರುತ್ತದೆ ಎಂದು ರಾಜ ಮನೆತನದವರು ಈಗಾಗಲೇ ತಿಳಿಸಿದ್ದಾರೆ. ಜನ ಜಗುಂಳಿಯಿಂದ ಕೊರೋನಾ ಹರಡದಂತೆ ತಡೆಗಟ್ಟಲು ಈ ಬಾರಿ ವಜ್ರಮುಷ್ಠಿ ಕಾಳಗ ಕೂಡ ಇರುವುದಿಲ್ಲ. ಒಟ್ಟಾರೆ ಸರಳವಾದರೂ ಮೈಸೂರಿನಲ್ಲಿ ದಸರಾ ಮಹೋತ್ಸವದ ಸಂಭ್ರಮ ಮನೆ ಮಾಡಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: