ಕ್ರೀಡೆಪ್ರಮುಖ ಸುದ್ದಿ

ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಪಾಕ್ ಮಾಜಿ ಕ್ರಿಕೆಟಿಗ ಉಮರ್ ಗುಲ್

ನವದೆಹಲಿ,ಅ.17-ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ವೇಗಿ ಉಮರ್‌ ಗುಲ್‌ ಪ್ರಸ್ತುತ ನಡೆಯುತ್ತಿರುವ ನ್ಯಾಷನಲ್‌ ಟಿ20 ಕಪ್‌ ಟೂರ್ನಿಯ ಪಂದ್ಯದ ಮುಕ್ತಾಯವಾದ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಇಂದು ವಿದಾಯ ಘೋಷಿಸಿದರು.

ಪಾಕಿಸ್ತಾನದಲ್ಲಿ ನಡೆಯುತ್ತಿರುವ ನ್ಯಾಷನಲ್‌ ಟಿ20 ಕಪ್‌ ಟೂರ್ನಿಯಲ್ಲಿ ಬಲೋಚಿಸ್ತಾನ್‌ ತಂಡದ ಪರ ಉಮರ್‌ ಗುಲ್‌ ಆಡಿದ್ದರು. ಶುಕ್ರವಾರ ರಾವಲ್ಪಿಂಡಿಯಲ್ಲಿ ನಡೆದಿದ್ದ ಸೆಮಿಫೈನಲ್‌ ಹಣಾಹಣಿಯಲ್ಲಿ ದಕ್ಷಿಣ ಪಂಜಾಬ್‌(ಪಾಕಿಸ್ತಾನ) ವಿರುದ್ಧ ಇವರ ತಂಡ ಸೋಲು ಅನುಭವಿಸಿತು. ಇದರ ಬೆನ್ನಲ್ಲೆ ಉಮರ್‌ ಗುಲ್‌ ತಮ್ಮ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. 36ರ ಪ್ರಾಯದ ಗುಲ್‌, 2016ರಲ್ಲಿ ಪಾಕಿಸ್ತಾನದ ಪರ ಕೊನೆಯ ಓಡಿಐ ಪಂದ್ಯವಾಡಿದ್ದರು.

ತುಂಬಾ ಭಾರವಾದ ಹೃದಯದಿಂದ ಮತ್ತು ಸಾಕಷ್ಟು ಆಲೋಚನೆಯ ನಂತರ, ಈ ನ್ಯಾಷನಲ್‌ ಟಿ 20 ಕಪ್ ಟೂರ್ನಿಯ ಬಳಿಕ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಗೆ ವಿದಾಯ ಹೇಳಲು ನಾನು ನಿರ್ಧರಿಸಿದ್ದೇನೆ ಎಂದು ಗುಲ್ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ನಾನು ಯಾವಾಗಲೂ ನನ್ನ ಸಂಪೂರ್ಣ ಹೃದಯದಿಂದ ಮತ್ತು ಶೇ.100 ರಷ್ಟು ಕಠಿಣ ಪರಿಶ್ರಮದಿಂದ ಪಾಕಿಸ್ತಾನ ಪರ ಆಡಿದ್ದೇನೆ. ಕ್ರಿಕೆಟ್ ಯಾವಾಗಲೂ ನನ್ನ ಪ್ರೀತಿ ಮತ್ತು ಉತ್ಸಾಹವಾಗಿರುತ್ತದೆ. ಆದರೆ ಎಲ್ಲಾ ಒಳ್ಳೆಯ ವಿಷಯಗಳು ಒಂದಲ್ಲ ಒಂದು ದಿನ ಕೊನೆಗೊಳ್ಳಬೇಕು ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ನನ್ನ ಕ್ರಿಕೆಟ್‌ ವೃತ್ತಿ ಜೀವನದ ಪಯಣದಲ್ಲಿ ಭಾಗವಾಗಿರುವ ಎಲ್ಲಾ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮತ್ತು ಎಲ್ಲಾ ತರಬೇತುದಾರರು, ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಎಲ್ಲಾ ಸಮಯದಲ್ಲೂ ನನ್ನನ್ನು ಬೆಂಬಲಿಸಿದ ಮಾಧ್ಯಮಗಳು, ನನ್ನ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ವಿಶೇಷವಾಗಿ ಧನ್ಯವಾದ ಹೇಳಿದ್ದಾರೆ.

ಪೇಶಾವರ್‌ ಮೂಲದ ಉಮರ್‌ ಗುಲ್‌ 2003ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅದೇ ವರ್ಷ ಗುಲ್‌ ಟೆಸ್ಟ್ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದ್ದರು. 2013ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅವರು ಕೊನೆಯ ಟೆಸ್ಟ್‌ ಪಂದ್ಯವಾಡಿದ್ದರು. 47 ಟೆಸ್ಟ್‌ ಪಂದ್ಯಗಳಿಂದ 163 ವಿಕೆಟ್‌ಗಳನ್ನು ಪಡೆದಿರುವ ಗುಲ್, 130 ಓಡಿಐ ಪಂದ್ಯಗಳಿಂದ 179 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಹಾಗೂ 60 ಟಿ20 ಪಂದ್ಯಗಳಿಂದ 85 ವಿಕೆಟ್‌ಗಳನ್ನು ಕಿತ್ತಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: