ದೇಶಪ್ರಮುಖ ಸುದ್ದಿ

ಕೊನೆಗೂ ದಂಡ ಸಹಿತ ತೆರಿಗೆ ಪಾವತಿಸಿದ ನಟ ರಜನಿಕಾಂತ್

ಚೆನ್ನೈ,ಅ.17-ತಮ್ಮ ಒಡೆತನದ ಕಲ್ಯಾಣ ಮಂಟಪದ ಆಸ್ತಿ ತೆರಿಗೆ ಸಂಬಂಧ ಚೆನ್ನೈ ಕಾರ್ಪೊರೇಷನ್ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ ಸೂಪರ್‌ಸ್ಟಾರ್ ರಜನಿಕಾಂತ್ ಇದೀಗ ದಂಡ ಸಹಿತ ತೆರಿಗೆ ಪಾವತಿಸಿದ್ದಾರೆ.

ಕಲ್ಯಾಣ ಮಂಟಪಕ್ಕೆ ಕಟ್ಟುವ ತೆರಿಗೆ ವಿಳಂಬವಾದ ಹಿನ್ನೆಲೆಯಲ್ಲಿ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ರಜನಿಕಾಂತ್ ಅವರಿಗೆ ನೋಟಿಸ್ ನೀಡಿತ್ತು. ಆದರೆ ಆಸ್ತಿ ತೆರಿಗೆ ಪಾವತಿಗೆ ನಿರಾಕರಿಸಿದ್ದ ರಜನಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ಹೈಕೋರ್ಟ್ ನಲ್ಲಿ ರಜನಿಕಾಂತ್‌ಗೆ ಹಿನ್ನಡೆಯಾದ ಹಿನ್ನೆಲೆಯಲ್ಲಿ, ಇದೀಗ ದಂಡ ಸಮೇತ 6,39,846 ರೂಪಾಯಿಗಳನ್ನು ಪಾವತಿ ಮಾಡಿದ್ದಾರೆ. ಮೊದಲ ಆರು ತಿಂಗಳಿಗಷ್ಟೇ ಅಲ್ಲದೆ ಮುಂದಿನ ಆರು ತಿಂಗಳಿಗೂ ಕೂಡ ತೆರಿಗೆ ಪಾವತಿಸಿದ್ದಾರೆ.

ಕೊರೊನಾ ಸೋಂಕಿನಿಂದಾಗಿ ಮಾರ್ಚ್ 24ರಿಂದ ಮದುವೆ ಹಾಲ್‌ಗಳನ್ನು ಮುಚ್ಚಲಾಗಿತ್ತು. ಇಲ್ಲಿಯವರೆಗೆ ಯಾವ ಆದಾಯವೂ ಬಂದಿಲ್ಲ. ಹಾಗಿರುವಾಗ 6.50 ಲಕ್ಷದಷ್ಟು ಆಸ್ತಿ ತೆರಿಗೆ ಕಟ್ಟುವುದು ಹೇಗೆ ಎಂದು ಉಲ್ಲೇಖಿಸಿದ್ದರು.

ನಿಯಮಿತವಾಗಿ ತೆರಿಗೆ ಪಾವತಿಸುತ್ತಿದ್ದೇನೆ. ಕೊನೆಯದಾಗಿ ಫೆಬ್ರವರಿ 14ರಂದು ತೆರೆಗೆ ಪಾವತಿಸಲಾಗಿದೆ. ಲಾಕ್ ಡೌನ್ ಗೂ ಮೊದಲು ಹಾಲ್ ಬುಕ್ ಮಾಡಿದ್ದ ಜನರಿಗೆ ಸರ್ಕಾರದ ಆದೇಶದಂತೆ ಹಣ ಮರುಪಾವತಿಸಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದರು.

ಸದ್ಯ ರಜನಿಕಾಂತ್ ಅಣ್ಣಾತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಬಳಿಕ ಇನ್ನೂ ಚಿತ್ರೀಕರಣ ಪ್ರಾರಂಭ ಮಾಡಿಲ್ಲ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಸದ್ಯದಲ್ಲೇ ಮತ್ತೆ ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗುತ್ತಿದೆ. ನವೆಂಬರ್ ನಿಂದ ಅಣ್ಣಾತೆ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: