ಪ್ರಮುಖ ಸುದ್ದಿಮೈಸೂರು

ರಾಜ್ಯದ ಹಣಕಾಸಿನ ಬಗ್ಗೆ ಸಿಎಂ ಶ್ವೇತಪತ್ರ ಹೊರಡಿಸಲಿ : ಮಾಜಿ ಸಂಸದ ಧೃವನಾರಾಯಣ್ ಆಗ್ರಹ

ಮೈಸೂರು,ಅ.17:- ರಾಜ್ಯದಲ್ಲಿ ಹಣಕಾಸಿನ ಪರಿಸ್ಥಿತಿ ಶೋಚನೀಯವಾಗಿದೆ. ರಾಜ್ಯದ ಜನತೆಗೆ ಹಾಗೂ ರೈತರಿಗೆ ಸರ್ಕಾರ ತಪ್ಪು ಮಾಹಿತಿ ನೀಡುತ್ತಿದೆ. ರಾಜ್ಯದ ಹಣಕಾಸಿನ ಬಗ್ಗೆ ಸಿಎಂ ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಸಂಸದ ಆರ್.ಧೃವನಾರಾಯಣ್ ಆಗ್ರಹಿಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ಧ್ರುವನಾರಾಯಣ್, ಪ್ರವಾಹ ಹಾನಿಗೆ ಸೂಕ್ತ ಪರಿಹಾರ ನೀಡುತ್ತೇವೆಂದು ಸಿಎಂ ಹೇಳಿದ್ದಾರೆ. ಆದರೆ ಸರ್ಕಾರದ ಖಜಾನೆ ಖಾಲಿಯಾಗಿದೆ. 2019ರಲ್ಲಿ ಪ್ರವಾಹದಿಂದ 35160 ಕೋಟಿ ರೂ. ನಷ್ಟವಾಗಿದೆ. ಆದರೆ ಕೇಂದ್ರ ಸರ್ಕಾರದಿಂದ ಕೇವಲ 3891 ಕೋಟಿ ರೂ ಪರಿಹಾರ ಬಂದಿದೆ. 2020-21 ರಲ್ಲಿ ಉಂಟಾದ ಪ್ರವಾಹದಿಂದ 9440ಕೋಟಿ ನಷ್ಟವಾಗಿದೆ. ಆಗಲೂ ಕೇಂದ್ರ ಸರ್ಕಾರ ಕೇವಲ 755ಕೋಟಿ ಪರಿಹಾರ ನೀಡಿ ಕೈತೊಳೆದು ಕೊಂಡಿದೆ. ಇದರಿಂದ ರಾಜ್ಯಕ್ಕೆ ಹೆಚ್ಚಿನ ಹೊರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಬೊಕ್ಕಸ ಖಾಲಿಯಾಗಿ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದೆ. ಆದರೆ ಸಿಎಂ ಹಣಕಾಸಿನ ಕೊರತೆ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಹಣಕಾಸಿನ ಪರಿಸ್ಥಿತಿ ಶೋಚನೀಯವಾಗಿದ್ದು ಹಣಕಾಸಿನ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು. ಉಪಚುನಾವಣೆಯಲ್ಲಿ ಈಗಾಗಲೇ ಗೆದ್ದಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಧೃವನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದರು. ಸಿಎಂ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈ ಹೇಳಿಕೆ ಸಮಂಜಸವಲ್ಲ. ಕೂಡಲೇ ಸಿಎಂ ಈ ಹೇಳಿಕೆಯನ್ನು ಹಿಂಪಡೆಯಬೇಕು. ಹಣದ ಪ್ರಯೋಗ ಅಧಿಕಾರದ ಪ್ರಯೋಗ ಹಾಗೂ ಆಪರೇಷನ್ ಕಮಲ ಮಾಡುವುದು ಹೇಗೆ ಎಂಬುದು ಬಿಎಸ್ ವೈಗೆ ಗೊತ್ತಿದೆ. ಬಿಎಸ್ವೈ ಈ ಹೇಳಿಕೆ ವಾಪಸ್ ಪಡೆಯಲೇಬೇಕು. ರಾಜ್ಯದಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಯುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದರು. ನಮ್ಮದು ಕುಟುಂಬ ರಾಜಕಾರಣದ ಪಕ್ಷ ಅಲ್ಲ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಗೆ ತಿರುಗೇಟು ನೀಡಿರುವ ಆರ್.ಧೃವನಾರಾಯಣ್, ಈ ಮಾತು ಹೇಳುವುದಕ್ಕೆ ಸಿ.ಟಿ.ರವಿಯವರಿಗೆ ನೈತಿಕತೆ ಇಲ್ಲ. ಸಿಎಂ ಯಡಿಯೂರಪ್ಪರ ಇಬ್ಬರೂ ಮಕ್ಕಳು ರಾಜಕಾರಣದಲ್ಲಿದ್ದಾರೆ. ಒಬ್ಬ ಮಗ ಸಂಸದನಾಗಿದ್ರೆ ಇನ್ನೊಬ್ಬ ಮಗ ತಂದೆಯ ಹೆಸರಲ್ಲಿ ಅಧಿಕಾರ ನಡೆಸ್ತಿದ್ದಾರೆ. ಇಷ್ಟೇ ಸಾಕಲ್ಲವೇ ಬಿಜೆಪಿ ಪಕ್ಷದಲ್ಲೂ ಕುಟುಂಬ ರಾಜಕಾರಣ ಇದೆ ಅನ್ನೋದಕ್ಕೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಹೆಚ್.ಎ.ವೆಂಕಟೇಶ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: