ಪ್ರಮುಖ ಸುದ್ದಿಮೈಸೂರು

ದಸರಾ ಬಳಿಕ ಹೆಚ್ ಡಿ ಕೋಟೆಯಲ್ಲಿ ಮೊದಲ ಅದಾಲತ್ : ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು, ಅ.18:- ದಸರಾ ಮುಗಿದ ಬಳಿಕ ಮೈಸೂರು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಅದಾಲತ್ ಗಳನ್ನು ಹಮ್ಮಿಕೊಳ್ಳಲಾಗುವುದು. ಹೆಚ್.ಡಿ. ಕೋಟೆಯಲ್ಲಿ ಮೊದಲ ಕಂದಾಯ ಅದಾಲತ್ ಹಮ್ಮಿಕೊಳ್ಳಲಿದ್ದೇನೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಗ್ರಾಮ ಪಂಚಾಯಿತಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆಗಾಗಿ ಇಲ್ಲಿನ ಸಂಗನೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಪ್ರಮುಖರ ಸಭೆಯಲ್ಲಿ ಸಚಿವರು ಮಾತನಾಡಿದರು.

ನೀರಾವರಿ, ಲೋಕೋಪಯೋಗಿ ಹಾಗೂ ಸಮಾಜಕಲ್ಯಾಣ ಇಲಾಖೆ ಇರಬಹುದು. ಈ ಭಾಗಗಳಲ್ಲಿ ಅದಾಲತ್ ಗಳನ್ನು ಮಾಡುತ್ತೇನೆ. ಹೀಗಾಗಿ ಎಚ್.ಡಿ.ಕೋಟೆಯಲ್ಲಿಯೇ ಮೊದಲ ಕಂದಾಯ ಅದಾಲತ್ ಹಮ್ಮಿಕೊಳ್ಳಲಾಗುವುದು. ಈ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತೇನೆ. ಪಕ್ಷದ ಕಾರ್ಯಕರ್ತರು ಈ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕು ಎಂದು ಸಚಿವರು ತಿಳಿಸಿದರು.

ನಾನು ಮೈಸೂರು ಉಸ್ತುವಾರಿ ಸಚಿವನಾಗಿದ್ದು, ಮೈಸೂರು ನಗರಕ್ಕೆ ಮಾತ್ರವಲ್ಲ. ಎಲ್ಲ 11 ವಿಧಾನಸಭಾ ಕ್ಷೇತ್ರಗಳಿಗೂ ಆಗಿದ್ದೇನೆ. ಈ ಹಿನ್ನೆಲೆಯಲ್ಲಿ ನಾನು ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡಿ, ಪಕ್ಷದ ಕಾರ್ಯಕರ್ತರನ್ನು ಬಲಗೊಳಿಸುವ ಕೆಲಸಕ್ಕೆ ಮುಂದಾಗಿದ್ದೇನೆ ಎಂದು ಸಚಿವರಾದ ಸೋಮಶೇಖರ್ ಹೇಳಿದರು.

ಗ್ರಾಮೀಣ ಭಾಗದ ಎಲ್ಲ 8 ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲೂ ಸಂಚಾರ ಮಾಡಿ ಪಕ್ಷದ ಕಾರ್ಯಕರ್ತರ ಸಭೆ ಮಾಡುತ್ತಿದ್ದೇನೆ. ಎಲ್ಲ ಪ್ರವಾಸದ ವೇಳೆಯೂ ಪಕ್ಷದ ಕಾರ್ಯಕರ್ತರಿಗೆ ಆಯಾ ಭಾಗದ ಅಧಿಕಾರಿಗಳು ಕೆಲಸ ಮಾಡಿಕೊಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಅವರ ವೈಯುಕ್ತಿಕ ಕೆಲಸವನ್ನು ಯಾರೂ ಕೇಳುವುದಿಲ್ಲ. ನ್ಯಾಯಯುತವಾದ ಕೆಲಸವಿದ್ದರೆ ಅದನ್ನು ಮಾಡಿಕೊಡಬೇಕು. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ. ಹೀಗಾಗಿ ಲೋಕ ಅದಾಲತ್ ಸೇರಿದಂತೆ ಯಾವುದೇ ಸಭೆಗಳಲ್ಲಿ ನನಗೆ ಅಧಿಕಾರಿಗಳ ಬಗ್ಗೆ ದೂರು ಬರಬಾರದು ಎಂದು ಸೂಚನೆ ನೀಡಿದ್ದಾಗಿ ಸಚಿವರು ತಿಳಿಸಿದರು.

ನನ್ನ ಕ್ಷೇತ್ರದಲ್ಲಿ ಕಾರ್ಯಕರ್ತರ ಶ್ರಮದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅವರ ಸಹಕಾರ, ಶ್ರಮ ಇಲ್ಲದಿದ್ದರೆ ನಾನು ಶಾಸಕನಾಗಿ ಆಯ್ಕೆಯಾಗುತ್ತಿರಲಿಲ್ಲ. ಹೀಗಾಗಿ ನನ್ನ ಚುನಾವಣೆಯಲ್ಲಿ ಹೇಗೆ ನಿಮ್ಮ ಬೆಂಬಲ ಇರುತ್ತದೋ, ಹಾಗೆಯೇ ನಿಮ್ಮ ಚುನಾವಣೆಗಳಲ್ಲಿ ನಾನೂ ಸಹ ಭಾಗವಾಗುತ್ತೇನೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಕಾರ್ಯಕರ್ತರಾದ ನಿಮಗೆ ಬೇಕಾದ ಸವಲತ್ತು ಕೊಡುವ, ಕೊಡಿಸುವ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ಕೊಡುತ್ತೇನೆ. ಈ ಕ್ಷೇತ್ರದಲ್ಲಿ ಸಿದ್ದರಾಜು ಅವರು ಶಾಸಕರಾಗಿ ಆಯ್ಕೆಯಾಗಬೇಕು. ಇದಕ್ಕೆ ಮೊದಲು ಕಾರ್ಯಕರ್ತರು ಬಲಗೊಳ್ಳಬೇಕು. ಹಾಗಾಗಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾರ್ಯಕರ್ತರು ಗೆಲ್ಲಬೇಕು. ಅಲ್ಲದೆ, ಸಿದ್ದರಾಜು ಅವರು, ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸ ಮಾಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ತರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಯಾವ ಯಾವ ಕೆಲಸ ಆಗಬೇಕೋ ಅದನ್ನು ಸಿದ್ದರಾಜು ಅವರ ಮುಖಾಂತರ ಮನವಿಗಳನ್ನು ತಂದರೆ ಕೂಡಲೇ ಬಗೆಹರಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು.

ಕೇಂದ್ರ ಸರ್ಕಾರದಿಂದ ಆತ್ಮನಿರ್ಭರ ಯೋಜನೆಯಡಿ ದೇಶಾದ್ಯಂತ 20 ಲಕ್ಷ ಕೋಟಿ ರೂ. ನೀಡಲಾಗಿದೆ. ಅದರಲ್ಲಿ ರಾಜ್ಯದ ಪಾಲಿನಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈಗಾಗಲೇ ಬೆಂಗಳೂರು, ಮೈಸೂರು ವಿಭಾಗದಲ್ಲಿ ಚಾಲನೆ ನೀಡಿದ್ದು, ಬೆಳಗಾವಿಯಲ್ಲಿಯೂ ಚಾಲನೆ ನೀಡಲಿದ್ದೇನೆ. ಪಶುಸಂಗೋಪನೆ, ಮೀನುಗಾರಿಕೆ, ಸಣ್ಣ ಉದ್ದಿಮೆ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಸಾಲವನ್ನು ನೀಡುವ ಮೂಲಕ ರಾಜ್ಯದ 30 ಜಿಲ್ಲೆಗಳಿಗೂ ಯೋಜನೆಗಳು ಮುಟ್ಟುವಂತೆ ನೋಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ನಾನು 27 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಈ ಸಂದರ್ಭದಲ್ಲಿ ಎಲ್ಲ ಎಪಿಎಂಸಿಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅಲ್ಲಿಗೆ ಹೋದ ಸಂದರ್ಭದಲ್ಲಿ ಎಲ್ಲರೂ ಸಹ ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ರೈತ ತನ್ನ ಉತ್ಪನ್ನವನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದಾಗಿದೆ. ಇದರಿಂದ ರೈತ ನನ್ನ ಬೆಳೆ ನನ್ನ ಹಕ್ಕು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.

ಕಾಯ್ದೆ ತಿದ್ದುಪಡಿಗೆ ಮೊದಲು ನೋಂದಾಯಿತ ರೈತರು ಎಪಿಎಂಸಿಯಿಂದ ಹೊರಗೆ ಮಾರಾಟ ಮಾಡಿದರೆ 5 ಸಾವಿರ ರೂಪಾಯಿ ದಂಡ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತಿತ್ತು. ಆದರೆ, ಈಗ ಆ ಸಮಸ್ಯೆ ಇಲ್ಲ. ಅಲ್ಲದೆ, ಮುಖ್ಯಮಂತ್ರಿಗಳು ಸಹ ಎಲ್ಲ ರೈತ ಮುಖಂಡರನ್ನು ಕರೆದು ಚರ್ಚಿಸಿಯೇ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.

ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷರಾದ ಮಂಗಳಾ ಸೋಮಶೇಖರ್ ಮಾತನಾಡಿ, ಪಕ್ಷದ ಬೆಳವಣಿಗೆ ಮುಖ್ಯವಾಗುತ್ತದೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಮೊದಲೇ ಸಿದ್ಧತೆ ಮಾಡಿಕೊಳ್ಳುವುದು ಏಕೆಂದರೆ ಮೊದಲು ಕಾರ್ಯಕರ್ತರು ಬಲಗೊಳ್ಳಬೇಕು. ನಿಮ್ಮನ್ನು ಬಲಗೊಳಿಸಲು ನಮಗೆ ಉತ್ತಮ ಅವಕಾಶ ಒದಗಿದ್ದು, ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿ ಕಾರ್ಯಕರ್ತರಿಗೆ ಸ್ಪಂದಿಸುವಂತಹ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸಿಕ್ಕಿರುವುದು ನಮ್ಮ ಅದೃಷ್ಟ. ಈ ಅವಕಾಶವನ್ನು ನಾವು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ಒಬ್ಬ ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಬಂದು ಕಾರ್ಯಕರ್ತರ ಸಮಸ್ಯೆಗಳನ್ನು ಕೇಳುತ್ತಿರುವುದು ಇದೇ ಮೊದಲು. ಇಂತಹ ಒಂದು ಪರಿಪಾಠವನ್ನು ಹುಟ್ಟುಹಾಕಿರುವ ಎಸ್.ಟಿ.ಸೋಮಶೇಖರ್ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಸಹಕಾರವನ್ನು ಪಡೆದು ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಸಾಧಿಸಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕಾರ್ಯಕರ್ತರು ಆಯ್ಕೆಯಾಗಬೇಕು ಎಂದು ಹೇಳಿದರು.

ಸರಗೂರು ವರ್ತಕರ ಮುಖಂಡರಾದ ಪ್ರತಾಪ್ ಅವರು ವಿವಿಧ ಅಭಿವೃದ್ಧಿ ಕೆಲಸಗಳಾಗಬೇಕು ಎಂದು ಸಚಿವರಿಗೆ ಮನವಿ ಮಾಡಿದರು. ಹೆಚ್.ಡಿ.ಕೋಟೆ ಮಂಡಳಾಧ್ಯಕ್ಷರಾದ ಗುರುಸ್ವಾಮಿ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

ಹೆಚ್.ಡಿ.ಕೋಟೆ-ಮಾದಾಪುರದಲ್ಲಿ ಶಕ್ತಿ ಕೇಂದ್ರ ಪ್ರಮುಖರ ಸಭೆ

ಹೆಚ್.ಡಿ.ಕೋಟೆಯ ಅಂಬೇಡ್ಕರ್ ಭವನ ಹಾಗೂ ಮಾದಾಪುರದಲ್ಲಿ ಬಿಜೆಪಿ ಶಕ್ತಿಕೇಂದ್ರಗಳ ಪ್ರಮುಖರು, ಮಂಡಳ ಪದಾಧಿಕಾರಿಗಳ ಸಭೆ ನಡೆಸಿದ ಸಚಿವರು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರು ಜಯಗಳಿಸಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಸೇರಿ ಸಂಘಟನೆ ಮಾಡೋಣ. ನನ್ನಿಂದ ಸಂಪೂರ್ಣ ಸಹಕಾರ ಸಿಗಲಿದೆ ಎಂದು ತಿಳಿಸಿದರು.

Leave a Reply

comments

Related Articles

error: