Uncategorized

ಯಕ್ಷಗಾನ ಕಲಾವಿದರಿಗೆ ಕೊರೊನಾ ಪರೀಕ್ಷೆ ಕಡ್ಡಾಯ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು,ಅ.19- ಯಕ್ಷಗಾನ ಕಲಾವಿದರಿಗೆ ಕೊರೊನಾ ಪರೀಕ್ಷೆ ಕಡ್ಡಾಯ ಮಾಡಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಕುಂದಾಪುರದಲ್ಲಿ ಮಾತನಾಡಿದ ಅವರು, ಕರಾವಳಿ ಕರ್ನಾಟಕ ಪ್ರಸಿದ್ಧ ಕಲೆ ಯಕ್ಷಗಾನ ಕೊರೊನಾ ಕಾರಣದಿಂದ ಅರ್ಧದಲ್ಲೇ ನಿಂತಿತ್ತು. ಆದರೆ ಈ ಬಾರಿಯ ತಿರುಗಾಟದಲ್ಲಿ ಮೇಳ ಹೊರಡುವ ಮುನ್ನ ಯಕ್ಷಗಾನ ಕಲಾವಿದರಿಗೆ ಕೊರೊನಾ ಪರೀಕ್ಷೆ ಕಡ್ಡಾಯ ಮಾಡಲಾಗುವುದು ಎಂದರು.

ಮೇಳ ಹೊರಟ ನಂತರವೂ ವಾರಕ್ಕೊಮ್ಮೆ ಉಚಿತ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಲಾಗುವುದು. ಮೇಳದ ತಿರುಗಾಟಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಅಲ್ಲದೇ ಕೊರೊನಾ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಮೇಳ ತಿರುಗಾಟ ಹೊರಡುವ ಕುರಿತು ಸಮಾಲೋಚನೆ ನಡೆದಿದೆ. ಅದಕ್ಕೆ ಬೇಕಾದ ಎಸ್‌ಓಪಿಗಳನ್ನು ಸಿದ್ಧಪಡಿಸಲಾಗುವುದು ಎಂದರು.

ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಸುಮಾರು 2 ಸಾವಿರಕ್ಕೂ ಅಧಿಕ ಹಿಮ್ಮೇಳ, ಮುಮ್ಮೇಳ ಕಲಾವಿದರು ಹಾಗೂ ಮೇಳದ ಸಿಬ್ಬಂದಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಮೇಳಗಳು ಈ ಬಾರಿ ತಿರುಗಾಟ ನಡೆಸುವುದು ಕಷ್ಟ ಎಂಬ ಹಿನ್ನೆಲೆಯಲ್ಲಿ ಧಾರ್ಮಿಕ ಕ್ಷೇತ್ರಗಳ ಮೂಲಕ ಮೇಳಗಳನ್ನು ಹೊರಡಿಸಬೇಕು ಎಂದು ಮನವಿ ಬಂದಿದೆ. ಎಲ್ಲೆಲ್ಲಿ ಹೊಸ ಮೇಳಗಳನ್ನು ಪ್ರಾರಂಭಿಸಬೇಕು ಎನ್ನುವುದನ್ನು ಪರಿಶೀಲಿಸಲಾಗುವುದು ಎಂದರು.

ಅಲ್ಲದೇ ಕಟ್ಟ ಕಡೆಯ ಕಲಾವಿದ ಕೂಡಾ ನಿರುದ್ಯೋಗಿಯಾಗಬಾರದು ಎಂದಿರುವ ಅವರು, ಎಲ್ಲರಿಗೂ ಅವಕಾಶ ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು. ಹರಕೆ ಬಯಲಾಟಗಳಲ್ಲದೇ ಇಡೀ ರಾತ್ರಿ ನಡೆಯುವ ಯಕ್ಷಗಾನಕ್ಕೆ ಬೇರೆ ಸ್ವರೂಪ ನೀಡಬೇಕೆ ಎಂಬ ಕುರಿತು ಚರ್ಚೆ ನಡೆಯಲಿದೆ. ಚರ್ಚೆಯ ಬಳಿಕ ಕಲಾವಿದರು ಹಾಗೂ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿ ಸಿದ್ಧಪಡಿಸಲಾಗುವುದು. ಕಲಾವಿದರಿಗೆ ಪಿಂಚಣಿ ನೀಡಬೇಕು ಎಂಬ ಪ್ರಸ್ತಾವನೆ ಕೂಡಾ ಇಲಾಖೆಯಲ್ಲಿದ್ದು, ಕೊರೊನಾ ಕಾರಣದಿಂದ ವಿಳಂಬವಾಗಿದೆ ಎಂದರು. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: