ದೇಶ

ಕೇಜ್ರಿವಾಲ್ ವಿರುದ್ಧ ಅಣ್ಣಾ ಹಜಾರೆ ಅಸಮಾಧಾನ

ಸಾಮಾಜಿಕ ಹೋರಾಟಗಾರ ಕಿಷನ್ ಬಾಬುರಾವ್ ಹಜಾರೆ ಅಲಿಯಾಸ್ ಅಣ್ಣಾ ಹಜಾರೆ ಮತ್ತೊಮ್ಮೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಶುಂಗ್ಲು ಸಮಿತಿ ವರದಿಯಲ್ಲಿ ಉಲ್ಲೇಖವಾಗಿರುವ ಆರೋಪಗಳ ಬಗ್ಗೆ ತಿಳಿದು ನೋವುಂಟಾಗಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಕೇಜ್ರಿವಾಲ್ ನನ್ನೊಂದಿಗೆ ಇದ್ದರು. ಆ ಸಮಯದಲ್ಲಿ ದೇಶದ ವಿದ್ಯಾವಂತ ಹೊಸ ಪೀಳಿಗೆ ಭ್ರಷ್ಟಾಚಾರದ ವಿರುದ್ಧ ತಿರುಗಿ ಬೀಳಲಿದೆ ಎಂಬ ಕನಸು ಕಂಡಿದ್ದೆ. ಆದರೆ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ನನ್ನ ಜೊತೆಗಿದ್ದ ಕೇಜ್ರಿವಾಲ್ ಅವರೇ ನನ್ನ ಕನಸುಗಳನ್ನು ನುಚ್ಚು ನೂರು ಮಾಡಿದ್ದಾರೆ ಎಂದು ಅಣ್ಣಾ ಹಜಾರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷವೆಂಬ ಹೊಸ ಪಕ್ಷ ಸ್ಥಾಪಿಸಿದಾಗ ಅದರಿಂದ ದೂರ ಉಳಿಯುವಂತೆ ದೇವರೇ ನನಗೆ ಬುದ್ಧಿ ನೀಡಿದ, ಆಮ್ ಆದ್ಮಿ ಪಕ್ಷದಿಂದ ದೂರ ಉಳಿಯದೇ ಇದ್ದಿದ್ದರೆ ನನ್ನ ಗೌರವವೂ ಹಾಳಾಗಿರುತ್ತಿತ್ತು ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಕೇಜ್ರಿವಾಲ್ ಪಕ್ಷ ಸ್ಥಾಪಿಸಿದಾಗಿನಿಂದ ಮುಖ್ಯಮಂತ್ರಿಯಾಗುವವರೆಗೆ ಅವರನ್ನು ಭೇಟಿಯಾಗುವುದಕ್ಕೆ ನನಗೆ ಇಷ್ಟ ಇರಲಿಲ್ಲ. ನನ್ನನ್ನು ಅವರ ಗುರು ಎಂದು ಏಕೆ ಹೇಳುತ್ತಿದ್ದರು ಎಂದು ಈಗ ನನಗೆ ಅರ್ಥವಾಗಿದೆ. ದೇವರೇ ನನ್ನನ್ನು ಕಾಪಾಡಿದ್ದಾನೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.   (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: