ಮೈಸೂರು

ಅತಿವೃಷ್ಠಿಯನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸುವಂತೆ ಒತ್ತಾಯಿಸಿ ಅ.23ರಂದು ರಾಜ್ಯಾದ್ಯಂತ ಪ್ರತಿಭಟನೆ : ಬಡಗಲಪುರ ನಾಗೇಂದ್ರ

ಮೈಸೂರು,ಅ.20:- ಅತಿವೃಷ್ಠಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಎನ್ ಡಿಆರ್ ಎಫ್ ಮಾನದಂಡವನ್ನು ಬದಲಿಸಿ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಪೂರ್ಣ ನಷ್ಟ ಪರಿಹಾರ ತುಂಬಿಕೊಡಿ ಎಂದು ಆಗ್ರಹಿಸಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಅ.23ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಉತ್ತರ ಮತ್ತು ಸುವರ್ಣ ಕರ್ನಾಟಕ ಸತತ 6ವರ್ಷಗಳ ಕಾಲ ಬರ ಎದುರಿಸಿದೆ. ನಿರಂತರ 3ವರ್ಷಗಳಿಂದ ಪ್ರವಾಹ ತಲೆದೋರಿ ಫಸಲು, ಆಸ್ತಿ, ಮನೆ ಮಠಗಳನ್ನು ಅಲ್ಲಿನ ರೈತರು ಮತ್ತು ಇತರೆ ಜನತೆ ಕಳೆದುಕೊಂಡಿದ್ದಾರೆ. ರಾಜ್ಯದ ಬರ ಮತ್ತು ಅತಿವೃಷ್ಠಿ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ಧೋರಣೆಯನ್ನು ತಾಳಿದ್ದು ಇದನ್ನು ಖಂಡಿಸಿ ಅ.23ರಂದು ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 2ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೆರಿ ಎದುರು ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಖಂಡನಾ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಸತತ ಮೂರು ವರ್ಷಗಳಿಂದ ರಾಜ್ಯದ ನಾನಾ ಭಾಗಗಳು ಪ್ರವಾಹಕ್ಕೆ ಒಳಗಾಗುತ್ತಿವೆ. ಇದನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಭಿಕ್ಷಾ ರೂಪದ ಪರಿಹಾರ ಮಾನದಂಡವನ್ನು ಹೊಂದಿರುವ ಎನ್ ಡಿ ಆರ್ ಎಫ್ ಮಾರ್ಗಸೂಚಿಗಳನ್ನು ಬದಲಿಸಬೇಕು. ಫಸಲು ನಷ್ಟ ಹೊಂದಿರುವ ರೈತರಿಗೆ ಸಂಪೂರ್ಣ ನಷ್ಟ ಪರಿಹಾರವನ್ನು ವೈಜ್ಞಾನಿಕವಾಗಿ ತುಂಬಿಕೊಡಬೇಕು. ಮನೆ, ಮಠ ಕಳೆದುಕೊಂಡವರಿಗೆ ಪುನರ್ ಮನೆ ನಿರ್ಮಾಣ ಮಾಡಿಕೊಡಬೇಕು. ವ್ಯವಸಾಯದ ಭೂಮಿ ಹದಗೆಟ್ಟಿದ್ದು ಅಂತಹ ಭೂಮಿಗಳನ್ನು ವ್ಯವಸಾಯ ಯೋಗ್ಯವಾಗಿ ಪರಿವರ್ತಿಸಬೇಕು. ಆ ಭಾಗದ ರೈತರ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿ ಹೊಸದಾಗಿ ಬಡ್ಡಿ ರಹಿತ ಸಾಲ ನೀಡಬೇಕು. ರೈತರ ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಾಕಿಯನ್ನು ಕೂಡಲೇ ಪಾವತಿಸಬೇಕು. ಬೆಳೆ ವಿಮೆ ಪರಿಹಾರ , ಇನ್ ಫುಟ್ ಸಬ್ಸಿಡಿ ಇವುಗಳನ್ನು ರೈತರ ಖಾತೆಗೆ ಕೂಡಲೇ ಜಮಾ ಮಾಡಬೇಕು. ಪ್ರವಾಹ ಪೀಡಿತ ಪ್ರದೇಶದ ವಿದ್ಯಾರ್ಥಿಗಳ ಶಾಲಾ-ಕಾಲೇಜು ಶುಲ್ಕವನ್ನು ಸರ್ಕಾರವೇ ಭರಿಸಬೇಕೆಂದು ಒತ್ತಾಯಿಸಲಾಗುವುದು ಎಂದರು.
ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಮೂರು ಸಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ಆದರೆ ಘೋಷಿಸಿರುವ ಬೆಲೆಗಿಂತಲೂ ರೈತರ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಕೊಂಡು ಲೂಟಿ ಮಾಡಲಾಗುತ್ತಿದೆ. ಎಪಿಎಂಸಿ ಕಾಯ್ದೆತಿದ್ದುಪಡಿ ತಂದಿರುವುದು ರೈತರ ಉತ್ಪನ್ನಗಳಿಗೆ ಹೆಚ್ಚು ಬೆಲೆ ದೊರಕಿಸಲೆಂದೇ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೊಬ್ಬೆ ಹೊಡೆಯುತ್ತಿವೆ. ಬಿಜೆಪಿ ಪಕ್ಷದ ಕಾರ್ಯಕರ್ತರು ಪ್ರತಿ ಹಳ್ಳಿಗಳಲ್ಲೂ ಇದನ್ನೇ ಪ್ರಚಾರ ಮಾಡುತ್ತಿದ್ದಾರೆ. ಆದರೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು ಈ ನಷ್ಟವನ್ನು ರೈತರಿಗೆ ಯಾರು ತುಂಬಿಕೊಡುತ್ತಾರೆ ಎಂದು ಸಂಘ ಪ್ರಶ್ನಿಸಿದೆ.
ಮೋದಿಯವರು ಮುಸುಕಿನ ಜೋಳಕ್ಕೆ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್ ಗೆ 1850 ರೂ.ಆದರೆ ಮಾರುಕಟ್ಟೆಯಲ್ಲಿ ಸಿಗುತ್ತಿರುವುದು 1200ರೂ. ಶೇಂಗಾ 5275ರೂ.ದೊರೆಯುತ್ತಿರುವುದು 4147ರೂ.ರಾಗಿ 3295 ಕೊಡುತ್ತಿರುವುದು 1850ರೂ, ಹತ್ತಿಗೆ 5515 ರೂ.ರೈತರಿಗೆ ಸಿಗುತ್ತಿರುವುದು 4400 ರೂ.ಭತ್ತ ಕ್ವಿಂಟಾಲ್ ಗೆ 1838 ರೂ.ನೀಡುತ್ತಿರುವುದು 1595ರೂ. ಕೇಂದ್ರ ಸರ್ಕಾರ ತಾನೇ ಘೋಷಿಸಿದ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಕೊಳ್ಳಲು ದುಡ್ಡಿಲ್ಲವಂತೆ, ರಾಜ್ಯ ಸರ್ಕಾರವು ಕೂಡ ಇದನ್ನೇ ಹೇಳುತ್ತಿದೆ. ಐಷಾರಾಮಿ ವಿಮಾನ ಕೊಳ್ಳಲು ಮೋದಿಯವರ ಖಜಾನೆಯಲ್ಲಿ ಹಣವಿದೆ. ಈ ಕಾರಣ ಕೃಷಿ ಉತ್ಪನ್ನಗಳನ್ನು ಕೊಳ್ಳಲು ಆವರ್ತನಿಧಿಗಾಗಿ ರೈತರೇ ಪ್ರಧಾನಮಂತ್ರಿ ಖಾತೆಗೆ ಹಣ ಜಮಾ ಮಾಡುವ ಅಭಿಯಾನಕ್ಕೆ ಈ ತಿಂಗಳ 23ರಂದು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶೆಟ್ಟಹಳ್ಳಿ ಚಂದ್ರೇಗೌಡ ಉಪಸ್ಥಿತರಿದ್ದರು.

Leave a Reply

comments

Related Articles

error: