ಮೈಸೂರು

ನಿಮ್ಮ ಕ್ಷೇತ್ರದ ಸಹವಾಸ ಸಾಕಪ್ಪ ಸಾಕು’ ಸಚಿವ ಮಹದೇವಪ್ಪರಿಂದ ಗೊಣಗಾಟ

ನಿಮ್ಮ ನಿಮ್ಮ ಊರುಗಳಿಗೆ ಹೊರಡಿ, ನಿಮ್ಮ ಊರಿನ ಬೂತ್‌ಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬರುವಂತೆ ನೋಡಿಕೊಳ್ಳಿ ಎಂದು ನಂಜನಗೂಡು ಉಪಚುನಾವಣೆ ಉಸ್ತುವಾರಿ, ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಕಾರ್ಯಕರ್ತರಿಗೆ ಕೈ ಮುಗಿದಿದ್ದಾರೆ.

‘ನಿಮ್ಮ ಕ್ಷೇತ್ರದ ಸಹವಾಸ ಸಾಕಪ್ಪ ಸಾಕು’ ಎಂದು ಸಚಿವರು  ಗೊಣಗಿಕೊಂಡಿದ್ದಾರೆ.ನಿಮ್ಮ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ ನೀವು ಕೂಡಲೇ ನಿಮ್ಮ ನಿಮ್ಮ ಗ್ರಾಮಗಳಿಗೆ ಹೊರಡಿ ಎಂದು ಕೈ ಮುಗಿದು ಕಾರ್ಯಕರ್ತರನ್ನು ಕಳುಹಿಸಿಕೊಡಲು ಮುಂದಾದ ವೇಳೆ ಹಲವು ದಿನಗಳ ಪ್ರಚಾರಲ್ಲಿ ಹೈರಾಣಾದ ಬೇಸರವನ್ನು ತೋರ್ಪಡಿಸಿಕೊಂಡರು.
ಇಂದು ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ಮಹದೇವಪ್ಪ ಅವರ ಮನೆಯ ಮುಂದೆ ಜಮಾಯಿಸಿದ ಕಾರ್ಯಕರ್ತರು ಸಂಜೆ 5 ಗಂಟೆಯಾದರೂ ಚದುರಿರಲಿಲ್ಲ. ಕೊನೆಯ ಹಂತದಲ್ಲಿ ಹಿರಿಯ ಕಾರ್ಯಕರ್ತರು, ಮುಖಂಡರೊಂದಿಗೆ ಮಾತುಕತೆ ನಡೆಸಿದ ಸಚಿವರು ಕೊನೆಯ ಎರಡು ದಿನಗಳ ಕಾಲ ಅನುಸರಿಸಬೇಕಾದ ಚುನಾವಣಾ ತಂತ್ರಗಾರಿಕೆ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡಿದರು. ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಕೆಲ ಕಾರ್ಯಕರ್ತರು ಹಣ ನೀಡುವಂತೆ ದುಂಬಾಲು ಬಿದ್ದಾಗ ಬೇಸರಿಸಿಕೊಂಡ ಮಹದೇವಪ್ಪ, ಇಲ್ಲಿಂದ ಕೂಡಲೇ ಹೊರಡಿ. ನಿಮ್ಮ ನಿಮ್ಮ ಊರುಗಳಿಗೆ ಹೋಗಿ ನಿಮ್ಮ ನಿಮ್ಮ ಬೂತ್‌ಗಳಲ್ಲಿ ಹೆಚ್ಚು ಮತಗಳು ಬರುವಂತೆ ನೋಡಿಕೊಳ್ಳಿ ಎಂದು ಕಾರ್ಯಕರ್ತರತ್ತ ಮುಖ ಗಂಟಿಕ್ಕಿಕೊಂಡೇ ಕೈ ಮುಗಿದರು. ನಂತರ ಅಲ್ಲಿಂದ ಮೈಸೂರು ಕಡೆ ತೆರಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಹದೇವಪ್ಪ, ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ 25 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಿಸುತ್ತೇವೆ. ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಅಭಿವೃದ್ಧಿಯಿಂದ ನಂಜನಗೂಡನ್ನು ಮಾದರಿಯಾಗಿ ಮಾಡಿದ್ದೇವೆ. ಹಿಂದಿನ ಉಸ್ತುವಾರಿ ಸಚಿವರು ಯಾವುದೇ ಕೆಲಸ ಮಾಡಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ವಿರುದ್ಧ ವಾಗ್ಧಾಳಿ ನಡೆಸಿದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: