ಮೈಸೂರು

ಮೈಸೂರು `ಎ’ ಶ್ರೇಣಿಗೆ ಬರಲು ಶೀಘ್ರವೇ ಆಕ್ಷನ್ ಪ್ಲಾನ್ ರಚಿಸಿ : ಜಿ.ಪಂ ಸಿಇಒ ಡಿ. ಭಾರತಿ

ಮೈಸೂರು.ಅ.20:- ಮುಂದಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಮೈಸೂರು `ಎ’ ಶ್ರೇಣಿಗೆ ಬರಲು ಶೀಘ್ರವೇ ಆಕ್ಷನ್ ಪ್ಲಾನ್ (ಕಾರ್ಯಸೂಚಿ) ರೂಪಿಸಿ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಭಾರತಿ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ಇಂದು ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಿಂದ ಮಾಸಿಕ ಪ್ರಗತಿಯ ವರದಿ ಪಡೆದರು. ಹಾಗೂ 20 ಅಂಶಗಳ ಕಾರ್ಯಕ್ರಮ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದು ಹೇಳಿದರು. ಚಾಮರಾಜನಗರ ಜಿಲ್ಲೆಯು ಎಲ್ಲದರಲ್ಲೂ ಹಿಂದುಳಿದ ಜಿಲ್ಲೆ ಎನ್ನುತ್ತೇವೆ. ಆದರೆ, ಎಸ್‍ಎಸ್‍ಎಲ್‍ಸಿಫಲಿತಾಂಶದಲ್ಲಿ ಮಾತ್ರ ಮುಂದಿರುತ್ತದೆ. ಹಾಗಾಗಿ ಈ ಬಾರಿ, ಮೈಸೂರು ಎ ಶ್ರೇಣಿಯಲ್ಲಿ ಬರುವಂತೆ ಕಾರ್ಯಸೂಚಿಗಳನ್ನು ರೂಪಿಸಬೇಕು. ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಅವರಿಗಾಗಿ ವಿಶೇಷ ತರಗತಿಗಳನ್ನು ಆಯೋಜಿಸುವ ಮೂಲಕ ಬೆಳವಣಿಗೆ ತರಬೇಕು ಎಂದರು.
ನವೆಂಬರ್ ತಿಂಗಳಿನಿಂದ ತರಗತಿಗಳು ಪ್ರಾರಂಭವಾಗುವ ಸಾಧ್ಯತೆಗಳಿವೆ. ಹೀಗಿರುವಾಗ, ಅಕ್ಟೋಬರ್ ತಿಂಗಳಾದರೂ, ಆಕ್ಷನ್ ಪ್ಲಾನ್ ತಯಾರಿಸಲಾಗದಿರುವುದು ಬೇಸರದ ಸಂಗತಿ ಎಂದರು.
ಜಿಲ್ಲೆಯಲ್ಲಿ ಅತೀ ಹೆಚ್ಚು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿದ್ದು, ಅವರ ಶಿಕ್ಷಣಕ್ಕೆ ಬೇಕಾದ ಸೌಲಭ್ಯಗಳನ್ನು ತಲುಪಿಸಬೇಕು. ವಿದ್ಯಾಗಮವು ಮಕ್ಕಳಿಗೆ ಅಷ್ಟೊಂದು ಪರಿಣಾಮ ಬೀರುತ್ತಿಲ್ಲ. ಹಾಗಾಗಿ ಸಾಧ್ಯವಾದರೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದೊಂದಿಗೆ ಹಳೆಯ ಪ್ರಶ್ನೆಪತ್ರಿಕೆಗಳು ಹಾಗೂ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ನೀಡಿ, ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಹುರ ಗ್ರಾಮದ ಬಹುತೇಕ ರೈತರು ತಮ್ಮ ಜಮೀನಿನಲ್ಲಿ ಹತ್ತಿಯನ್ನು ಬೆಳೆದಿದ್ದಾರೆ ಆದರೆ ಅವರಿಗೆ ನಿರೀಕ್ಷಿಸಿದಷ್ಟು ಉತ್ತಮ ಇಳುವರಿ ಆಗದಿರುವುದು ಬೇಸರದ ಸಂಗತಿ ಹಾಗೂ ನವಣೆ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ ಆದರೆ ಈ ವರ್ಷದ ಮುಂಗಾರು ಹಂಗಾಮಿನಲ್ಲಿ ನವಣೆಯ ಬಿತ್ತನೆಯು ಶೂನ್ಯ ಇದೆ ಇದರ ಬಗ್ಗೆ ಕ್ರಮವಹಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿ, ರೈತರಿಗೆ ಯಾವ ರೀತಿಯ ಬೇಡಿಕೆ ಇದೆ ಅಂತಹದನ್ನು ತಕ್ಷಣವೇ ಒದಗಿಸಲು ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಅಂಗವಿಕಲರು ನಡೆದಾಡಲು ಹಾಗೂ ಏಳಲೂ ಆಗದ ಸ್ಥಿತಿಯಲ್ಲಿದ್ದಾರೆ. ಇದರಿಂದ ಅವರಿಗೆ ಸರಿಯಾದ ಚಿಕಿತ್ಸೆ ಲಭಿಸುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆಯ ಉಪ ನಿರ್ದೇಶಕರಾದ ಕೆ. ಪದ್ಮ ಅವರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಅಂಥವರಿಗೆ 3ಕಿ.ಮೀ. ವ್ಯಾಪ್ತಿಯಲ್ಲಿರುವ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರೆತಂದು ಚಿಕಿತ್ಸೆ ಕೊಡಿಸಲು ಕ್ರಮ ವಹಿಸಬೇಕು. ಇದರೊಂದಿಗೆ ವಿಶೇಷ ಚೇತನರಿಗೆ ದೃಢೀಕೃತ ಪ್ರಮಾಣ ಪತ್ರ ನೀಡಬೇಕು ಎಂದು ನೂತನ ಡಿಎಚ್‍ಒ ಡಾ. ಅಮರನಾಥ್ ಅವರಿಗೆ ಸೂಚಿಸಿದರು.ಜಿಲ್ಲಾ ಪಂಚಾಯತ್‍ನ ಅಧ್ಯಕ್ಷೆ ಪರಿಮಳ ಶ್ಯಾಂ ಅವರು ಮಾತನಾಡಿ ಅಧಿಕಾರಿಗಳು ಸಭೆಯಲ್ಲಿ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ ಮುಂದಿನ ಸಭೆಯಲ್ಲಾದರೂ ಸೂಕ್ತವಾದ ಮಾಹಿತಿಯನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇವೇಳೆ ಜಿಲ್ಲಾ ಪಂಚಾಯತ್‍ನ ಉಪಾಧ್ಯಕ್ಷೆ ಗೌರಮ್ಮಸೋಮಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: