ಮೈಸೂರು

ತಂಬಾಕು ಬೆಳೆಗೆ 200ರಿಂದ 250 ರೂಪಾಯಿ ಬೆಲೆ ನೀಡುವಂತೆ ಒತ್ತಾಯಿಸಿ ಏಕಾಂಗಿ ಪ್ರತಿಭಟನೆ

ಮೈಸೂರು,ಅ.22:- 2020-21ನೇ ಸಾಲಿನ ತಂಬಾಕು ಬೆಳೆಗೆ 200ರಿಂದ 250 ರೂಪಾಯಿ ಬೆಲೆ ನೀಡುವಂತೆ ಮತ್ತು ಕಾರ್ಡ್ ದಾರರ ಸಂಖ್ಯೆಗಳನ್ನು ಅತಿ ಜರೂರಾಗಿ ಬಗೆಹರಿಸಿಕೊಡುವಂತೆ ಒತ್ತಾಯಿಸಿ ಶ್ರೀನಿವಾಸ ಎಂಬವರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಎದುರಿಂದು ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಹೋಬಳಿಯ ಆರ್.ತುಂಗಾ ಗ್ರಾಮದ ಶ್ರೀನಿವಾಸ್ ಪಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು ಈ ಬಾರಿ ತಂಬಾಕಿಗೆ ಉತ್ತಮವಾದ ಅಂದರೆ 200ರೂ ನಿಂದ 250ರೂ. ಗಳ ಬೆಲೆ ದೊರೆಯದ ಕಾರಣ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ತಂಬಾಕು ಹರಾಜು ಮಾರುಕಟ್ಟೆ ಕೆಲವು ದಿನಗಳಿಂದ ಪ್ರಾರಂಭವಾಗಿದ್ದು ರೈತರಿಗೆ ಉತ್ತಮ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ತಂಬಾಕು ಬೆಳೆಯನ್ನು ಬೆಳೆಯಲು ಪ್ರತಿ ಕೆಜಿಗೆ ಸುಮಾರು 195ದಿಂದ 215 ರೂ.ಗಳು ಖರ್ಚಾಗುತ್ತಿದ್ದು ತಂಬಾಕು ಮಾರುಕಟ್ಟೆ ನೀಡುತ್ತಿರುವ ಬೆಲೆ ಸುಮಾರು 130ರಿಂದ 170 ರೂಗಳು ಮಾತ್ರ. ರೈತರು ಮಾಡುತ್ತಿರುವ ಖರ್ಚು ಕೂಡ ಸಿಗದೆ ನಷ್ಟವನ್ನು ಹೊಂದುತ್ತಿದ್ದಾರೆ. ಆದ್ದರಿಂದ ತಂಬಾಕಿನ ಬೆಲೆಯನ್ನು ಕನಿಷ್ಟ ಸುಮಾರು 200ರಿಂದ 250 ರೂ.ಗಳನ್ನು ನೀಡಿ ಮಾರಕಟ್ಟೆಯನ್ನು ಮಾಡಬೇಕು. ಕಾರ್ಡ್ ದಾರರಿಗೆ ವಿಧಿಸುವ ಕಮಿಷನ್ ದರವನ್ನು ಕಡಿತಗೊಳಿಸಬೇಕು. ಇಲ್ಲವಾದಲ್ಲಿ ಕಾರ್ಡ್ ದಾರರಿಗೆ ತಂಬಾಕಿನ ಲೈಸೆನ್ಸ್ ನೀಡಬೇಕು. ಇಲ್ಲವಾದರೆ ರೈತರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತದಲ್ಲಿದ್ದಾರೆ. ಆದ್ದರಿಂದ ಮಾರುಕಟ್ಟೆಗ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಿಕೊಡಬೇಕು. ಇಲ್ಲವಾದಲ್ಲಿ ರೈತ ಪರ ಸಂಘಟನೆಗಳು ಮತ್ತು ರೈತರೆಲ್ಲರೂ ಸೇರಿ ಉಗ್ರವಾದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: