ಮೈಸೂರು

ಸಂಸದ ಪ್ರತಾಪ್ ಸಿಂಹ ಮೇಲೆ ವಿನಾಕಾರ ಆರೋಪ ಮಾಡಿರುವ ಮೇಯರ್ ತಸ್ನೀಂ ವರ್ತನೆ ಖಂಡಿಸಿದ ಬಿಜೆಪಿ ನಗರಾಧ್ಯಕ್ಷ

ಮೈಸೂರು,ಅ.23:- ಸಂಸದ ಪ್ರತಾಪ್ ಸಿಂಹರ ಮೇಲೆ ವಿನಾಕಾರಣ ಇಲ್ಲಸಲ್ಲದ ಆರೋಪಗಳನ್ನು ಮಾಡಿರುವ ಮೇಯರ್ ತಸ್ನೀಂ ಅವರ ವರ್ತನೆಯನ್ನು ಬಿಜೆಪಿ ನಗರಾಧ್ಯಕ್ಷ ಟಿ. ಶ್ರೀವತ್ಸ ಖಂಡಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಇದುವರೆವಿಗೂ ಮೈಸೂರಿನ ಅಭಿವೃದ್ದಿಗೆ ತಸ್ನೀಂ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರಲ್ಲದೇ, ರಸ್ತೆ, ರೈಲು ಸೇರಿದಂತೆ ಹಲವು ಅಭಿವೃದ್ದಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿ,ಅದನ್ನು ಸಾಕಾರಗೊಳಿಸಿದ ಸಂಸದ ಪ್ರತಾಪ್ ಸಿಂಹ ಅವರ ಬಗ್ಗೆ ಮಾತನಾಡುವ ನೈತಿಕತೆ ಮೇಯರ್ ಅವರಿಗಿಲ್ಲ ಎಂದು ಕಿಡಿಕಾರಿದರು.
ಮಹಾಪೌರರಾಗಿದ್ದರೂ ತಮ್ಮದೇ ವಾರ್ಡ್ ನ ಅಭಿವೃದ್ದಿ ಮಾಡುವಲ್ಲಿ ವಿಫಲವಾಗಿರುವ ತಸ್ನೀಂ ಅವರು, ಕ್ಷುಲ್ಲಕ ಕಾರಣಕ್ಕಾಗಿ ಸಂಸದರ ವಿರುದ್ಧ ಅನ್ಯಥಾ ಸುಳ್ಳು ಆರೋಪ ಮಾಡುತ್ತ ಕಾಲಾಹರಣ ಮಾಡುತ್ತಿದ್ದು, ಉಳಿದಿರುವ ಅವಧಿಯಲ್ಲಾದರೂ ಅಭಿವೃದ್ದಿ ಕೆಲಸ ಮಾಡುವತ್ತ ಗಮನ ಹರಿಸಲಿ ಎಂದು ಸಲಹೆ ನೀಡಿದರು.
ಮೇಯರ್ ಸ್ಥಾನದ ಅರಿವಿಟ್ಟುಕೊಂಡು ತಸ್ನೀಂ ಅವರು, ಮೈಸೂರು ನಗರದ ಅಭಿವೃದ್ದಿ ಬಗ್ಗೆ ಚಿಂತಿಸಲಿ ಹಾಗೂ ನೂತನ ಯೋಜನೆಗಳನ್ನು ಸಾಕಾರಗೊಳಿಸಲಿ.ಅದನ್ನು ಬಿಟ್ಟು ರಾಜಕೀಯ ಪ್ರೇರಿತವಾಗಿ ಸಂಸದ ಪ್ರತಾಪ್ ಸಿಂಹರ ವಿರುದ್ಧ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತ ಕಾಲಹರಣ ಮಾಡುವುದನ್ನು ಬಿಡಲಿ.ಇಲ್ಲದಿದ್ದಲ್ಲಿ ಮೇಯರ್ ವಿರುದ್ಧ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಶ್ರೀವತ್ಸ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರನ್ನು ಕಾಡು ಮನುಷ್ಯ ಎಂದು ಜರಿದಿರುವ ಸಿದ್ದರಾಮಯ್ಯರ ಹೇಳಿಕೆಯನ್ನು ಸಹ ಖಂಡಿಸಿದರು.
ಮುಖ್ಯಂತ್ರಿಯಾಗಿ ಆಡಳಿತ ನಡೆಸಿರುವ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಮಾತನಾಡುವಾಗ ಎಚ್ಚರವಹಿಸಲಿ.ಯಾರನ್ನೋ ಮೆಚ್ಚಿಸಲಿಕ್ಕೆ ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದು ಒತ್ತಾಯಿಸಿದರು.
ಈ ಕೂಡಲೇ ಸಿದ್ದರಾಮಯ್ಯನವರು,ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರಲ್ಲಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಮುಖಂಡರಾದ ಮೋಹನ್,ಸುಬ್ಬಯ್ಯ, ಹೆಚ್.ಜಿ.ಗಿರಿಧರ್, ಸೋಮಸುಂದರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: