ಕರ್ನಾಟಕ

ಕೆ.ಕಲ್ಯಾಣ್ ಕುಟುಂಬಕ್ಕೆ ವಂಚಿಸಿದ್ದ ಆರೋಪಿಗೆ ಜಾಮೀನು ಮಂಜೂರು

ಬೆಳಗಾವಿ,ಅ.23-ಚಿತ್ರ ಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಕಲಹಕ್ಕೆ ಕಾರಣವಾಗಿ, ಅವರ ಪತ್ನಿ ಅಶ್ವಿನಿ ಕುಟುಂಬಕ್ಕೆ ವಂಚಿಸಿ ಜೈಲು ಸೇರಿದ್ದ ಶಿವಾನಂದ ವಾಲಿಗೆ ಜಾಮೀನು ಸಿಕ್ಕಿದೆ.

ಶಿವಾನಂದ ವಾಲಿಗೆ ಬೆಳಗಾವಿಯ ಎರಡನೇ ಜೆಎಂಎಫ್ ಸಿ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ. ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ನ್ಯಾಯಾಧೀಶೆ ಬಿ.ವಿ.ಲಲಿತಾಶ್ರೀ ಆದೇಶ ಹೊರಡಿಸಿದ್ದು, 50 ಸಾವಿರ ಭದ್ರತೆ ಹಾಗೂ ಬೆಳಗಾವಿ ಬಿಟ್ಟು ತೆರಳದಂತೆ, ತಿಂಗಳಿಗೊಮ್ಮೆ ಠಾಣೆಗೆ ಭೇಟಿ ನೀಡುವಂತೆ ಷರತ್ತು ವಿಧಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದವನಾದ ಶಿವಾನಂದ ವಾಲಿ ಕೆ.ಕಲ್ಯಾಣ್ ಪತ್ನಿ ಅಶ್ವಿನಿ ತವರು ಮನೆಯವರಿಗೆ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ್ದ. ಪೂಜೆ ನೆಪದಲ್ಲಿ ಕೆ. ಕಲ್ಯಾಣ್ ಅವರ ಅತ್ತೆ ಮತ್ತು ಮಾವರಿಂದ 45 ಲಕ್ಷ ರೂಪಾಯಿ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ. ಕೆ.ಕಲ್ಯಾಣ್ ಹಾಗೂ ಅಶ್ವಿನಿ ಸಂಸಾರದಲ್ಲಿ ಬಿರುಕು ಮೂಡಲು ಕಾರಣವಾಗಿದ್ದ.

ಕಲ್ಯಾಣ್ ಮನೆ ಕೆಲಸದಾಕೆ ಗಂಗಾ ಕುಲಕರ್ಣಿ ಸಹಾಯದಿಂದ ಈತ ಭಾರೀ ವಂಚನೆ ಎಸಗಿದ್ದು, ಕಲ್ಯಾಣ್ ಅವರು ದಾಖಲಿಸಿದ್ದ ದೂರಿನನ್ವಯ ಮಾಳಮಾರುತಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಬಂಧಿಸಿದ್ದರು. ಆನಂತರ ಶಿವಾನಂದ ವಾಲಿ ಮಾಟ ಮಂತ್ರದ ಮೂಲಕ ಹಲವು ಕಡೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿತ್ತು. (ಎಂ.ಎನ್)

Leave a Reply

comments

Related Articles

error: