ಕರ್ನಾಟಕಪ್ರಮುಖ ಸುದ್ದಿ

ನವೆಂಬರ್ 17 ರಿಂದ ಪದವಿ ಕಾಲೇಜು ಆರಂಭ, ಕಾಲೇಜಿಗೆ ಬರುವುದು-ಬಿಡುವುದು ವಿದ್ಯಾರ್ಥಿಗಳ ಆಯ್ಕೆ: ಡಿಸಿಎಂ ಡಾ.ಅಶ್ವತ್ಥನಾರಾಯಣ

ಬೆಂಗಳೂರು,ಅ.23-ರಾಜ್ಯದಲ್ಲಿ ನವೆಂಬರ್ 17 ರಿಂದ ಪದವಿ ಕಾಲೇಜುಗಳ ಆರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಬಗ್ಗೆ ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್​ 17ರಂದು ಕಾಲೇಜು ಆರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಆದರೆ ತರಗತಿ ಬರುವುದು ಕಡ್ಡಾಯವಲ್ಲ. ಪೋಷಕರ ಅನುಮತಿ ಮೇರೆಗೆ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು. ಕಾಲೇಜಿಗೆ ಬರುವುದು-ಬಿಡುವುದು ವಿದ್ಯಾರ್ಥಿಗಳ ಆಯ್ಕೆ. ಆನ್​ಲೈನ್ ಮುಖಾಂತರ ಬೇಕಾದರೂ ಕ್ಲಾಸ್ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.

ಪ್ರಾಕ್ಟಿಕಲ್ ಕ್ಲಾಸ್​ಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಎಲ್ಲ ಕಾಲೇಜಿನಲ್ಲೂ ಟಾಸ್ಕ್ ಪೋರ್ಸ್​ ಇರುತ್ತದೆ. ಪೋಷಕರು ರೈಟಿಂಗ್​ ಮೂಲಕ ಒಪ್ಪಿಗೆ ಸೂಚಿಸಿದರಷ್ಟೇ ಕಾಲೇಜಿಗೆ ಬರಲು ವಿದ್ಯಾರ್ಥಿಗಳಿಗೆ ಅನುಮತಿ ನೀಡಲಾಗುತ್ತದೆ. ಯಾರಿಗೂ ಒತ್ತಾಯವಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ನೋಡಿಕೊಂಡು ಪಾಳಿ ಪ್ರಕಾರ ಕ್ಲಾಸ್ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಯುಜಿಸಿ ನೀಡಿರುವ ಮಾರ್ಗಸೂಚಿಗಳು ಹಾಗೂ ಕೋವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ತರಗತಿಗಳನ್ನು ನಡೆಸಲಾಗುತ್ತದೆ. ಕಾಲೇಜುಗಳ ನಿರ್ವಹಣೆ ಬಗ್ಗೆ ಪ್ರತಿ ಕಾಲೇಜಿನಲ್ಲಿಯೂ ಟಾಸ್ಕ್ ಫೋರ್ಸ್ ರಚನೆಗೆ ಸೂಚಿಸಲಾಗಿದೆ. ಹಾಸ್ಟೆಲ್‌ಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಶ್ವತ್ಥನಾರಾಯಣ ಅವರು ಪ್ರಾತ್ಯಕ್ಷಿಕೆ ಮೂಲಕ ಕಾಲೇಜು ಆರಂಭಿಸಿ ತೆಗೆದುಕೊಳ್ಳಲಿರುವ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಬೇರೆ ರಾಜ್ಯದಲ್ಲಿ ಕಾಲೇಜು ಓಪನ್ ಆಗಿದ್ದು, ಅಲ್ಲಿನ ಪರಿಸ್ಥಿತಿ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ಮಾಡಲಾಯಿತು. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಪ್ರತಿ ವಿದ್ಯಾರ್ಥಿಗೂ ಉಷ್ಣಾಂಶ ಚೆಕ್ ಮಾಡುವ ಬಗ್ಗೆಯೂ ತೀರ್ಮಾನಿಸಲಾಯಿತು. ಈ ಎಲ್ಲ ಚರ್ಚೆಯ ಬಳಿಕ ಕಾಲೇಜು ಆರಂಭದ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. (ಎಂ.ಎನ್)

Leave a Reply

comments

Related Articles

error: