ಮೈಸೂರು

ಭೀಕರ ಪ್ರವಾಹ , ಕೊರೊನಾ ಸಂದರ್ಭದಲ್ಲಿ ದುಂದು ವೆಚ್ಚದ ದಸರಾ ಎಷ್ಟು ಸರಿ : ಬಿ.ಎ. ಶಿವಶಂಕರ್ ಪ್ರಶ್ನೆ

ಮೈಸೂರು,ಅ.23:- ರಾಜ್ಯದಲ್ಲಿ ಕೋವಿಡ್ -19 ನಿಂದ ಸಹಸ್ರಾರು ಮಂದಿ ಮೃತಪಟ್ಟಿದ್ದಾರೆ. ಇಡೀ ರಾಜ್ಯ ಶೋಕ ಸಾಗರದಲ್ಲಿ ಮುಳುಗಿದೆ. ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಹಿಂದೆಂದೂ ಕಾಣದಂತಹ ಭೀಕರ ಪ್ರವಾಹದಿಂದ ಜನರ ಬದುಕು ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ 15ಕೋಟಿ ರೂ.ವೆಚ್ಚದಲ್ಲಿ ದಸರಾವನ್ನು ಆಚರಿಸಿ ದುಂದು ವೆಚ್ಚವನ್ನು ಮಾಡುವುದು ಎಷ್ಟು ಸರಿ ಎಂದು ಮೈಸೂರು ಜಿಲ್ಲಾ ಕನ್ನಡ ಚಳುವಳಿಗಾರರ ಸಂಘದ ಅಧ್ಯಕ್ಷ ಬಿ.ಎ.ಶಿವಶಂಕರ್ ಪ್ರಶ್ನಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಸರಳ ದಸರಕ್ಕೂ 15ಕೋಟಿ ರೂ.ಅಗತ್ಯವಿತ್ತೇ? ಅದ್ದೂರಿ ದಸರಾಕ್ಕೂ, ಸರಳ ದಸರಾಕ್ಕೂ ವ್ಯತ್ಯಾವೇನೆಂದೇ ತಿಳಿಯುತ್ತಿಲ್ಲ. ಮೈಸೂರು ರಾಜವಂಶಸ್ಥರು ಸಾಂಪ್ರದಾಯಿಕವಾಗಿ ನಡೆಸುವ ದಸರಾಕ್ಕೆ ರಾಜ್ಯ ಸರ್ಕಾರ ಸಮ್ಮತಿ ನೀಡಿ ಈ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದಾಗಿತ್ತು. ಪ್ರಸಕ್ತ ರಾಜ್ಯವು ಸಾವಿನ ಮನೆಯಾಗಿ ಹಲವಾರು ಕುಟುಂಬಗಳಲ್ಲಿ ಕತ್ತಲೆ ತುಂಬಿದೆ. ಮೈಸೂರಿನಲ್ಲಿ ರಸ್ತೆಗಳು ಗುಂಡಿಬಿದ್ದಿವೆ. ಗೋಡೆಗಳು ಶಿಥಿಲಗೊಂಡು ಸುಣ್ಣಬಣ್ಣವಿಲ್ಲದೆ ಬಣಗುಡುತ್ತಿವೆ. ಈ ಸಂದರ್ಭದಲ್ಲಿ ಸರಳ ದಸರಾ ಎಂದು ಹೇಳಿ ಅದ್ಧೂರಿ ದಸರಾ ಆಚರಣೆ ಮಾಡುತ್ತ ಜಗಮಗಿಸುವ ವಿದ್ಯುತ್ ದೀಪಗಳನ್ನು ನೋಡಲು ಜನರು ಮುಗಿಬಿದ್ದಿದ್ದು ಕೊರೋನಾವನ್ನು ಲೆಕ್ಕಿಸದೆ ಸೆಲ್ಫಿಗೆ ಮುಗಿ ಬೀಳುತ್ತಿದ್ದಾರೆ. ಕೊರೋನಾದಿಂದ ಮುಂದಾಗುವ ಅನಾಹುತ ತಪ್ಪಿಸಲು ವಿದ್ಯುತ್ ದೀಪಗಳಿಗೆ ಕೂಡಲೇ ಕಡಿವಾಣ ಹಾಕಿ. ಈ ಹಣವನ್ನು ಪ್ರವಾಹ ಸಂತ್ರಸ್ತರಿಗೆ ನೀಡಬಹುದಾಗಿತ್ತುಎಂದರು.
ಕೊರೋನಾ ನಿಯಂತ್ರಿಸಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರವಾಸಿ ಸ್ಥಳಗಳಿಗೆ ನಿರ್ಬಂಧ ವಿಧಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಅದನ್ನು ತೆರವುಗೊಳಿಸಿ, ದಸರಾಕ್ಕೆ ಬನ್ನಿ ಎಂದು ಸ್ವಾಗತಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತದ ಈ ಆದೇಶದಿಂದ ಜನರು ಗೊಂದಲಕ್ಕೆ ಸಿಲುಕಿದ್ದಾರೆ ಎಂದರು. ನೀವು ದಸರಾಕ್ಕೆ ಆಯ್ಕೆ ಮಾಡಿಕೊಂಡಿರುವುದು 300ಮಂದಿ ಸಾರ್ವಜನಿಕರ ತೆರಿಗೆ ಹಣದಿಂದ ಈ ಬಾರಿಯ ದಸರಾ ವೀಕ್ಷಿಸುತ್ತಿರುವ ಆ 300ಜನ ಮಹಾನುಭಾವರ ಪಟ್ಟಿಯನ್ನು ಈ ಕೂಡಲೇ ಪ್ರಕಟಿಸಿ , 300ಜನರಲ್ಲದೆ ಇನ್ಯಾರಿಗೂ ಪ್ರವೇಶವಿಲ್ಲ ಎಂಬುದನ್ನು ಖಚಿತಪಡಿಸಿ, ದಸರಾ ಖರ್ಚು ವೆಚ್ಚಕ್ಕೆ ಶ್ವೇತಪತ್ರವನ್ನುರಾಜ್ಯ ಸರ್ಕಾರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ವಿಶ್ವರಾಜ್ ಸೇರಿದಂತೆ ಕೆಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: