ಮೈಸೂರು

ಕೆ.ಪಿ.ಎಸ್.ಸಿ ನೇಮಕಾತಿಯಲ್ಲಿ ಮಾಜಿ ಸಿಎಂ ಹೆಚ್ ಡಿಕೆ ಹೇಳಿರುವ ಸ್ವಜನ ಪಕ್ಷಪಾತದ ಕುರಿತು ತನಿಖೆಯಾಗಬೇಕೆಂದು ಒತ್ತಾಯಿಸಿ ಪತ್ರ ಚಳವಳಿ

ಮೈಸೂರು,ಅ.24:- ಕೆ.ಪಿ.ಎಸ್.ಸಿ ನೇಮಕಾತಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ವ-ಜನ ಪಕ್ಷಪಾತದ ಹೇಳಿಕೆ ಕುರಿತು ತನಿಖೆಯಾಗಬೇಕು ಎಂದು ಆಗ್ರಹಿಸಿ ಕರ್ನಾಟಕ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಪತ್ರಚಳವಳಿ ನಡೆಸಲಾಯಿತು.

ಶನಿವಾರ ಪಾಲಿಕೆ ಎದುರಿನ ಅಂಚೆಪಟ್ಟಿಗೆ ಎದುರು ಜಮಾವಣೆಗೊಂಡ ಪ್ರತಿಭಟನಕಾರರು ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವವಹಿಸಿದ್ದ ಕರ್ನಾಟಕ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಬಿಡದಿ ಬಳಿಕ ಕೇತಗಾನಹಳ್ಳಿಯಲ್ಲಿ ನಡೆದ ಶಿಕ್ಷಕರ ಸಭೆಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಅವರು ಜೆಡಿಎಸ್ ನಲ್ಲಿದ್ದಾಗ ಅವರ ಕುಟುಂಬದ 10-12 ಮಂದಿಗೆ ತಾವು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಕ್ಲಾಸ್ ಒನ್ ಹುದ್ದೆಗಳನ್ನು ಕೊಡಿಸಿದ್ದಾಗಿ ಹೇಳಿದ್ದಾರೆ ಎಂದು ವರದಿಯಾಗಿದ್ದು, ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದರು.
ನನ್ನ ಅಧಿಕಾರ ಅವಧಿಯಲ್ಲಿ ಕೆಪಿಎಸ್ಸಿ ನೇಮಕಾತಿ ನಡೆದಿತ್ತು. ಆಗ ಎಚ್.ಎನ್.ಕೃಷ್ಣ ಅವರು ಕೆಪಿಎಸ್ಸಿಯ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಪುಟ್ಟಣ್ಣ ಅವರು ನನ್ನ ಮೂಲಕ ನೂರಾರು ಮಂದಿಗೆ ಉದ್ಯೋಗ ಕೊಡಿಸಿದ್ದಾರೆ ಎಂದು ಹೇಳಿದ್ದು, ತಾವು ಅಧಿಕಾರದಲ್ಲಿದ್ದಾಗ ಅದನ್ನು ಎಷ್ಟು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದು ಜನರಿಗೆ ತಿಳಿಯಬೇಕು ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಸ್ಥಾನದ ಅಧಿಕಾರ ದುರುಪಯೋಗವಾಗಿದೆ

ಮುಖ್ಯಮಂತ್ರಿ ಸ್ಥಾನದ ಅಧಿಕಾರ ದುರುಪಯೋಗವಾಗಿದೆ ಎನ್ನುವುದನ್ನು ಅವರ ಮಾತುಗಳೇ ದೃಢಪಡಿಸುತ್ತವೆ. ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಅಧಿಕಾರಸ್ಥರು ಹಸ್ತಕ್ಷೇಪ ನಡೆಸಲು ಆಯೋಗವು ಅವಕಾಶ ಮಾಡಿಕೊಟ್ಟಿರುವುದು ಕೂಡ ಅಕ್ಷಮ್ಯ. ರಾಜ್ಯಪಾಲರು ಮಧ್ಯ ಪ್ರವೇಶಿಸಿ ನೇಮಕಾತಿಗಳ ಬಗ್ಗೆ ಸಾಧ್ಯವಿರುವ ಕಾನೂನು ಕ್ರಮ ಜರುಗಿಸಿ ತನಿಖೆ ನಡೆಸುಂತೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಕೆಎಎಸ್ ಹುದ್ದೆಗಳ ಯಾವ ನೇಮಕಾತಿಯು ಪಾರದರ್ಶಕವಾಗಿ ನಡೆದಿಲ್ಲ

1998, 1999,2004 ಮತ್ತು 2015ರ ಕೆಎಎಸ್ ಹುದ್ದೆಗಳ ಯಾವ ನೇಮಕಾತಿಯು ಪಾರದರ್ಶಕವಾಗಿ ನಡೆದಿಲ್ಲ ಮತ್ತು ಆರೋಪಮುಕ್ತವಾಗಿಲ್ಲ. ಆದ್ದರಿಂದ, 2015ರ ಕೆಎಎಸ್ ಹುದ್ದೆಯ ನೇಮಕಾತಿಯಲ್ಲಿ ಭಾರೀ ಅಕ್ರಮವಾಗಿರುವುದು ವರದಿಯಾಗಿದೆ. ಈ ನೇಮಕಾತಿಯ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.

ಪತ್ರಚಳವಳಿಯಲ್ಲಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್.ಆರ್.ನಾಗೇಶ್, ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಪಿ.ರಾಜು, ದಲಿತ ವಿದ್ಯಾರ್ಥಿ ಒಕ್ಕೂಟದ ಗೌರವ ಸಲಹೆಗಾರ ಮಹೇಶ್ ಸೋಸಲೆ, ದಲಿತ ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಸಂದೇಶ್, ಪಾಲಿಕೆ ಮಾಜಿ ಸದಸ್ಯ ಎಚ್.ಎಸ್.ಪ್ರಕಾಶ್ ಇತರರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: