ಮೈಸೂರು

ನೂತನ ಪದವಿ ವಿದ್ಯಾರ್ಥಿಗಳಿಗೆ “ಪೂರ್ವ ಪರಿಚಯ ಕಾರ್ಯಕ್ರಮ”

ಮೈಸೂರು, ಅ. 24: – ಎಸ್‍ ಬಿಆರ್‍ ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸದಾಗಿ ಪದವಿ ಕೋರ್ಸುಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿ ಗಳಿಗೆ “ಪೂರ್ವ ಪರಿಚಯ ಕಾರ್ಯಕ್ರಮವನ್ನು” ಆನ್‍ಲೈನ್ ಮೂಲಕ ಮೈಕ್ರೋಸಾಫ್ಟ್ ಟೀಮ್ಸ್ ಸಾಫ್ಟವೇರ್‍ನ ವೇದಿಕೆಯಲ್ಲಿ, ಕಾಲೇಜಿನ ಆಡಿಯೋ ವಿಷುಯಲ್ ಮೀಡಿಯಾ ಸೆಂಟರ್‍ನಲ್ಲಿ ಇತ್ತೀಚೆಗೆ ಜರುಗಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಗಮ, ಬೆಳವಣಿಗೆ, ವ್ಯವಸ್ಥೆ, ರಚನೆ, ಕೋರ್ಸುಗಳ ಪ್ರಮುಖ ಅಂಶಗಳು, ಸಂಸ್ಥೆಯ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಹಾಗೂ ವಿದ್ಯಾರ್ಥಿಗಳ ಕಾರ್ಯಕ್ಷಮತೆ, ಪ್ರಗತಿಯಲ್ಲಿ ಪೋಷಕರ ಪಾತ್ರ, ವಿದ್ಯಾರ್ಥಿಗಳಲ್ಲಿ ಮೂಡುವ ಪ್ರಶ್ನೆಗಳು, ಆತಂಕ ನಿವಾರಣೆ ಮಾಡಿ, ಮಾರ್ಗದರ್ಶನ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಅಂಶವಾಗಿತ್ತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ಅವರು ಕಾಲೇಜು ಆಡಳಿತ ವರ್ಗ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಹಾಗೂ ಕಾರ್ಯಕ್ರಮದಲ್ಲಿ ಹಾಜರಿದ್ದ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತಾ, 37 ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಯಲ್ಲಿ ಕ್ರಿಯಾಶೀಲವಾಗಿಸಿಕೊಂಡು ಘನತೆಯಿಂದ ಮುನ್ನಡೆಯುತ್ತಿರುವ ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಅಭಿನಂದಿಸಿದರು. ಸ್ನಾತಕ, ಸ್ನಾತಕೋತ್ತರ ಹಾಗೂ ಸಂಶೋಧನೆಯವರೆಗೂ ವಿಸ್ತರಿಸಿ ನ್ಯಾಕ್‍ನಿಂದ ‘ಎ’ ಗ್ರೇಡ್ ಪಡೆದು ಸ್ವಾಯತ್ತತೆಯಿಂದ ಸಾಗಿದೆ. ಸ್ವಾಯತ್ತ ಕಾಲೇಜಿನ ಅನುಕೂಲಗಳನ್ನು ವಿವರವಾಗಿ ತಿಳಿಸಿಕೊಟ್ಟರು. ಸಾಮಾಜಿಕ ಜವಾಬ್ದಾರಿಯಿಂದ, ಸಾಂಸ್ಕೃತಿಕ ಮನಸ್ಸಿನಿಂದ ಕೂಡಿ ಮೌಲ್ಯಗಳನ್ನು ಮೈಗೂಡಿಸಿಕೊಂಡು ಈ ದೇಶದ ಉತ್ತಮ ನಾಗರೀಕರಾಗಲು ಎಲ್ಲಾ ರೀತಿಯಿಂದಲೂ ನಾವು ನಿಮ್ಮೊಡನಿದ್ದೇವೆಂದು ಭರವಸೆ ನೀಡಿ, ಶುಭ ಕೋರಿದರು.
ಎಸ್‍ಬಿಆರ್‍ಆರ್ ಮಹಾಜನ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾ. ವಿಜಯಲಕ್ಷೀ ಮುರಳೀಧರ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಾ, ಪದವಿಯಲ್ಲಿ ನಮ್ಮ ಕಾಲೇಜನ್ನು ಆಯ್ಕೆ ಮಾಡಿಕೊಂಡ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತವನ್ನು ಕೋರಿ ಸಂತೋಷವನ್ನು ವ್ಯಕ್ತಪಡಿಸಿದರು. ಒಬ್ಬ ವಿದ್ಯಾರ್ಥಿಯ ಕಾಲೇಜು ಅನುಭವವು ಅವನ ಸಾಮಾಜಿಕ ಅಂಶವು ಶಿಕ್ಷಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಯು ಶಿಕ್ಷಣದ ಜೊತೆಗೆ ಕೌಶಲ್ಯಾಧರಿತ ಶಿಕ್ಷಣಕ್ಕೂ ಒತ್ತು ನೀಡಬೇಕು. ವಿದ್ಯಾರ್ಥಿಯ ಸರ್ವತೋಮುಖ ಏಳಿಗೆಗೆ ಶಿಕ್ಷಣ ತಜ್ಞರ ಪಾತ್ರವು ಮುಖ್ಯವಾಗುತ್ತದೆ ಎಂದರು.
ನೂತನ ವಿದ್ಯಾರ್ಥಿಗಳಿಗೆ ಕಾಲೇಜಿನ ಶಿಸ್ತು, ನಿಯಮ, ನಿಬಂಧನೆಗಳನ್ನು ಮತ್ತು ಈ ಶೈಕ್ಷಣಿಕ ವರ್ಷದ ಮಾರ್ಗಸೂಚಿಗಳನ್ನು ಅರಿಯಲು ಈ ಕಾರ್ಯಕ್ರಮವು ಸಹಕಾರಿಯಾಗುತ್ತದೆ. ಇವನೆಲ್ಲಾ ಅರಿತು, ಪ್ರತಿಯೊಬ್ಬ ವಿದ್ಯಾರ್ಥಿಯು ಪಾಲಿಸಬೇಕು. ನಿಮಗೆ ಶುಭವಾಗಲಿ ಎಂದು ಹಾರೈಸಿದರು.
ಎಸ್‍ಬಿಆರ್‍ಆರ್ ಮಹಾಜನ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶೈಕ್ಷಣಿಕ ಸಲಹೆಗಾರರಾದ ಡಾ. ಎಸ್.ಆರ್. ರಮೇಶ್ ಅವರು ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿ, ಹೊಸ ವಿದ್ಯಾರ್ಥಿಗಳು ಕಾಲೇಜಿನ ಅಧ್ಯಾಪಕರು ಹಾಗೂ ಆಡಳಿತ ಸಿಬ್ಬಂದಿಯಿಂದ ಶಿಕ್ಷಣ ಸಂಬಂಧಿ ಮಾಹಿತಿಗಳನ್ನು ಪಡೆಯಬಹುದು. ಅವರ ಬೆಂಬಲ, ಪ್ರೋತ್ಸಾಹ ನಿಮಗೆ ಯಾವಾಗಲೂ ಇರುತ್ತದೆ, ಇದನ್ನು ಉಪಯೋಗಿಸಿಕೊಂಡು, ಸರಿಯಾದ ರೀತಿಯ ಜ್ಞಾನ, ಕೌಶಲ್ಯ, ವರ್ತನೆ ಮತ್ತು ನೈತಿಕತೆಯ ಗುಣಗಳನ್ನು ಅಳವಡಿಸಿಕೊಂಡು ಮುಂದೆ ಬನ್ನಿ ಎಂದು ಸಲಹೆ ನೀಡಿ, ಉತ್ತಮವಾದ ಕಾಲೇಜನ್ನು ಆಯ್ಕೆ ಮಾಡಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಗೀತಾ ಅವರು ಕಾಲೇಜಿನ ಇತಿಹಾಸ, ರಚನೆ, ನಿಯಮ, ನಿಬಂಧನೆಗಳು, ವಿವಿಧ ಪಠ್ಯಕ್ರಮ, ಸಹಪಠ್ಯ ಚಟುವಟಿಕೆಗಳು, ಕೌಶಲ್ಯಾಧರಿತ ಕೋರ್ಸುಗಳು, ಹಾಗೂ ಶಿಕ್ಷಣದ ಮಹತ್ವವನ್ನು ಪಿ.ಪಿ.ಟಿ. ಪ್ರಸ್ತುತಿಗಳಿಂದ ಮತ್ತು ಕೆಲವು ವಿಡಿಯೋಗಳಿಂದ ಪ್ರಚುರಪಡಿಸಿ, ವಿದ್ಯಾರ್ಥಿಗಳಿಗೆ ವಿವರಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಪ್ರಶ್ನೋತ್ತರ ಸಂವಾದ ಕಾರ್ಯಕ್ರಮವು ನಡೆಯಿತು, ವಿದ್ಯಾರ್ಥಿಗಳ ಸಂದೇಹವನ್ನು ಪರಿಹರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹೊಸ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಅಧ್ಯಾಪಕರು ಪಾಲ್ಗೊಂಡು, ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಡಾ. ಗೀತಾ ವಂದಿಸಿದರು.
ಈ ಕಾರ್ಯಕ್ರಮಕ್ಕೆ ತಾಂತ್ರಿಕ ಸಹಕಾರವನ್ನು ಕಾಲೇಜಿನ ಸಿಸ್ಟಮ್ ಅಡ್ಮಿನ್ ಮಂಜುನಾಥ್ ಹಾಗೂ ಅಶೋಕ್ ನೀಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: