ಮೈಸೂರು

ಏ.9 : ನಂಜನಗೂಡು ವಿಧಾನಸಭಾಕ್ಷೇತ್ರದ 236ಮತಗಟ್ಟೆಗಳಲ್ಲಿ ಮತದಾನ : ಸೂಕ್ತಬಂದೋಬಸ್ತ್ : ಡಿ.ರಂದೀಪ್

214 ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಏ.9ರಂದು ಬೆಳಿಗ್ಗೆ 7ರಿಂದ ಸಾಯಂಕಾಲ 5ರವರೆಗೆ ಚುನಾವಣೆ ನಡೆಯಲಿದ್ದು, ಇಲ್ಲಿನ ಒಟ್ಟು 236 ಮತಗಟ್ಟೆಗಳಲ್ಲಿ ಮತದಾನವು ನಡೆಯಲಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಡಿ.ರಂದೀಪ್ ತಿಳಿಸಿದರು.

ನಂಜನಗೂಡಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಂಜನಗೂಡು ವಿಧಾನ ಸಭಾ ಕ್ಷೇತ್ರದಲ್ಲಿ 236ಮತಗಟ್ಟೆಗಳಿದ್ದು, 1,01,930 ಪುರುಷರು, 99,888ಮಹಿಳೆಯರು ಸೇರಿದಂತೆ ಒಟ್ಟು 2,01,818 ಮತದಾರರಿದ್ದಾರೆ ಎಂದರು. ಮತದಾರರು ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಸೇರಿದಂತೆ ಚುನಾವಣಾ ಆಯೋಗ ಸೂಚಿಸಿದ 12 ಗುರುತಿನ ಚೀಟಿಯಲ್ಲಿ ಯಾವುದಾದರೂ ಒಂದನ್ನು ತೋರಿಸಿ ಮತ ಚಲಾಯಿಸಬಹುದು ಎಂದರು. 15 ಫ್ಲೈಯಿಂಗ್ ಸ್ಕ್ವಾಡ್ ಗಳು, 15ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡ, 16ಸೆಕ್ಟರ್ ಅಧಿಕಾರಿಗಳು, 6ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ವಿಶೇಷ ಮಾದರಿ ನೀತಿ ಸಂಹಿತೆ ತಂಡ, 9 ಮೈಸೂರು ನಗರದಲ್ಲಿ ರಚಿಸಿರುವ ಮಾದರಿ ನೀತಿ ಸಂಹಿತೆ ತಂಡಗಳನ್ನು ರಚಿಸಲಾಗಿದ್ದು, ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ನಡೆಸಲು ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದರು.

ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 66ಅಬಕಾರಿ ಪ್ರಕರಣಗಳು, 29 ಮಾದರಿ ನೀತಿ ಸಂಹಿತೆ ಪ್ರಕರಣಗಳು, 57,08,920ನಗದು, 27600ಬೆಲೆಯ 133 ಲೀಟರ್ ಮದ್ಯ, 30ಕಾರು, 1ಸ್ಕೂಟರ್ ಗಳನ್ನು ಮುಟ್ಟುಗೋಲು ಮಾಡಲಾಗಿದೆ ಎಂದು ತಿಳಿಸಿದರು. ಮತದಾನ ಮಾಡುವವರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುವುದು. 236 ಮತಗಟ್ಟೆಗಳಲ್ಲಿ 72 ಅತಿಸೂಕ್ಷ್ಮ ಮತಗಟ್ಟೆಗಳು, 124 ಸೂಕ್ಷ್ಮ ಮತಗಟ್ಟೆಗಳು, 40ಸಾಮಾನ್ಯ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ. ಮತಗಟ್ಟೆ ಅಧಿಕಾರಿಗಳನ್ನು ಮತದಾನಕ್ಕೆ ಕರೆದೊಯ್ಯಲು, ಮತದಾನ ಮುಗಿದ ನಂತರ ಡಿ.ಮಸ್ಟರಿಂಗ್ ಸ್ಥಳಕ್ಕೆ ಕರೆತರಲು 32 ಕೆ.ಎಸ್.ಆರ್.ಟಿ. ಹಾಗೂ 5 ಜೀಪ್, 6ಖಾಸಗಿ ಮಿನಿ ಬಸ್ ಗಳನ್ನು ನಿಯೋಜಿಸಲಾಗಿದೆ. ಮತದಾನದ ದಿನದಂದು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಲ್ಲಾ ಕಾರ್ಖಾನೆಗಳಿಗೆ ಹಾಗೂ ಇತರೇ ಖಾಸಗಿ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದರು. ಆಯ್ದ ಮತಗಟ್ಟೆಗಳಲ್ಲಿ ಮೈಕ್ರೋ ಅಬ್ ಸರ್ ವರ್ ಗಳನ್ನು ನೇಮಕ ಮಾಡಲು ಕ್ರಮವಹಿಸಲಾಗಿದ್ದು, ಒಟ್ಟು 170 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ ಸರ್ ವರ್ ಗಳನ್ನಾಗಿ ಕೇಂದ್ರ ಸರ್ಕಾರದ ನೌಕರರನ್ನು ನೇಮಕ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಒಂದು ಗಂಟೆ ಮುಂಚಿತವಾಗಿ ಮತದಾರ ಮತಚಲಾಯಿಸಿ ಸರಿಯಿದೆಯೇ ಎಂದು ಖಾತ್ರಿಪಡಿಸಿಕೊಳ್ಳಬಹುದು. ಆದರೆ ನಕಲಿಯಾಗಿರುತ್ತದೆ. ಕೇವಲ ಮಾಹಿತಿಗಾಗಿ ಮಾತ್ರ ಎಂದರು. ಮತಗಟ್ಟೆಯ ಅಧಿಕಾರಿಗಳು ಏಪ್ರಿಲ್ 9ರಂದು ಮೊಬೈಲ್ ಬಳಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. 24 ಗಂಟೆಯೂ ಮತಗಟ್ಟೆಗಳಲ್ಲಿ ಸಿಸಿಟಿವಿ ಕಾರ್ಯನಿರ್ವಹಿಸಲಿದೆ. ಕೇಂದ್ರ ಭದ್ರತಾಪಡೆಯೂ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಮಾತನಾಡಿ ಈಗಾಗಲೇ ರೌಡಿಶೀಟರ್ ಗಳ ಬಳಿ ಇರುವ ಮಾರಕಾಸ್ತ್ರಗಳನ್ನೆಲ್ಲ ವಶಕ್ಕೆ ಪಡೆಯಲಾಗಿದೆ. ಯಾವುದೇ ದೊಂಬಿ, ಗಲಾಟೆಗೂ ಇಲ್ಲಿ ಅವಕಾಶ ನೀಡಲಾಗುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: