ಪ್ರಮುಖ ಸುದ್ದಿಮೈಸೂರು

ಜಂಬೂಸವಾರಿ ವೀಕ್ಷಣೆಗೆ ಅಂಬಾವಿಲಾಸ ಅರಮನೆ ಮುಂಭಾಗದಲ್ಲಿ ಸಿದ್ಧತೆ

ಮೈಸೂರು,ಅ.26:- ವಿಜಯದಶಮಿ 10ನೇ ದಿನವಾದ ಇಂದು ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿ ನಡೆಯಲಿದೆ.
ಈ ಬಾರಿ ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ಅರಮನೆ ಆವರಣದೊಳಗೆ ಕೇವಲ ಮುನ್ನೂರು ಮಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಇಂದು ನಡೆಯಲಿರುವ ಜಂಬೂಸವಾರಿ ವೀಕ್ಷಣೆಗೆ ಅಂಬಾವಿಲಾಸ ಅರಮನೆ ಮುಂಭಾಗದಲ್ಲಿ ಸಿದ್ಧತೆ ಮಾಡಲಾಗಿದೆ.
ಮೆರವಣಿಗೆ ವೀಕ್ಷಣೆಗಾಗಿ ಕುರ್ಚಿ, ಶಾಮಿಯಾನ ವ್ಯವಸ್ಥೆ, ಜಂಬೂಸವಾರಿಗೆ ತೆರಳುವ ಎಡ ಮತ್ತು ಬಲ ಭಾಗಗಳಲ್ಲಿ ಆಸನ ವ್ಯವಸ್ಥೆ, ಗಣ್ಯರಿಗೆ ಜನಪ್ರತಿನಿಧಿಗಳಿಗೆ ಕೂರಲು ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಮಾಡಲಾಗಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜಂಬೂಸವಾರಿಯಲ್ಲಿ ಭಾಗವಹಿಸಲಿದ್ದಾರೆ. 750 ಕೆಜಿಯ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು, ತನ್ನ ಪಡೆಯೊಂದಿಗೆ ಗಾಂಭೀರ್ಯದೊಂದಿಗೆ ಹೆಜ್ಜೆ ಹಾಕಲಿದ್ದಾನೆ.
ಕೊರೋನಾ ಸೋಂಕಿನ ಭಯದ ಹಿನ್ನೆಲೆಯಲ್ಲಿ ಅರಮನೆ ಆವರಣಕ್ಕಷ್ಟೇ ಈ ಬಾರಿ ಜಂಬೂಸವಾರಿ ಸೀಮಿತವಾಗಿದ್ದು, ಪ್ರತಿವರ್ಷ 5.5 ಕಿಲೋಮೀಟರ್ ಸಾಗುತ್ತಿದ್ದ ಜಂಬೂಸವಾರಿ ಮೆರವಣಿಗೆ ಈ ಬಾರಿ ಕೇವಲ ಮುನ್ನೂರು ಮೀಟರ್ ಅಷ್ಟೇ ಸಾಗಿ ಪೂರ್ಣಗೊಳ್ಳಲಿದೆ. ಅಂದರೇ ಕೇವಲ 30ರಿಂದ 40 ನಿಮಿಷಗಳಲ್ಲಿ ಪೂರ್ಣಗೊಳ್ಳಲಿದೆ.
ಜಂಬೂಸವಾರಿ ಮೆರವಣಿಗೆಗೆ ಇಂದು ಮಧ್ಯಾಹ್ನ 02.59 ರಿಂದ 3.20ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಂದಿಧ್ವಜಕ್ಕೆ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಲಿದ್ದಾರೆ.
3.40 ರಿಂದ 4.15ರೊಳಗೆ ಸಲ್ಲುವ ಶುಭಲಗ್ನದಲ್ಲಿ ಅಭಿಮನ್ಯುವಿನ ಮೇಲೆ ಪ್ರತಿಷ್ಠಾಪಿಸಲಾಗಿರುವ ಚಿನ್ನದ ಅಂಬಾರಿಯೊಳಗೆ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.ಈ ಬಾರಿ ಜಂಬೂಸವಾರಿಯೊಂದಿಗೆ 4 ಕಲಾತಂಡ, ಅಶ್ವಾರೋಹಿ ದಳದ ಎರಡು ತುಕಡಿ, ಸ್ತಬ್ಧಚಿತ್ರ, ಕರ್ನಾಟಕ ಪೊಲೀಸ್ ವಾದನದ ಆನೆಗಾಡಿ ಸಾಗಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: