ಪ್ರಮುಖ ಸುದ್ದಿಮೈಸೂರು

ಅಂಬಾರಿಯಲ್ಲಿ ವಿರಾಜಮಾನಳಾದ ತಾಯಿ : ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯೊಂದಿಗೆ ಸಂಪನ್ನ


ಮೈಸೂರು,ಅ.26::- ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾದ ವಿಶ್ವವಿಖ್ಯಾತ ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಬಿ.ಎಸ್.ಯಡಿಯೂರಪ್ಪನವರು ಅಭಿಮನ್ಯು ಆನೆ ಹೊತ್ತಿರುವ 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮಧ್ಯಾಹ್ನ 3.54ಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಗೌರವ ವಂದನೆ ಸಲ್ಲಿಸುತ್ತಿದ್ದಂತೆ 21 ಸುತ್ತು ಕುಶಾಲತೋಪು ಸಿಡಿಸಲಾಯಿತು. ಆನೆಗಳು ಸೊಂಡಿಲೆತ್ತಿ ನಮಸ್ಕರಿಸಿದರೆ, ಆವರಣದಲ್ಲಿ ಸೇರಿದ್ದ ಬೆರಳೆಣಿಕೆ ಮಂದಿ ತಲೆಬಾಗಿ ನಮಿಸಿ ನಾಡದೇವತೆಗೆ ನಮಿಸಿದರು.

ಮೊದಲ ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯು ಜೊತೆ ಕಾವೇರಿ, ವಿಜಯಾ, ವಿಕ್ರಂ ಹಾಗೂ ಗೋಪಿ ರಾಜಗಾಂಭೀರ್ಯದಿಂದ ಜಂಬೂಸವಾರಿಯಲ್ಲಿ ಹೆಜ್ಜೆ ಇಟ್ಟವು. ಕೇವಲ ಐದು ಕಲಾ ತಂಡಗಳು, ಎರಡು ಸ್ತಬ್ಧಚಿತ್ರಗಳು, ಹಿಂದೆ ಪೊಲೀಸ್‌ ಬ್ಯಾಂಡ್‌ ಹಾಗೂ ಅಶ್ವಾರೋಹಿ ಪಡೆ ಸಾಗಿದವು.
ಮಧ್ಯಾಹ್ನ 2.59ರಿಂದ 3.20ರ ಅವಧಿಯಲ್ಲಿ ನಂದಿಧ್ವಜಕ್ಕೆ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪೂಜೆ ಸಲ್ಲಿಸಿದರು.
ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ಸಿಎಂ ಯಡಿಯೂರಪ್ಪ ಅವರು, ಅರಮನೆ ಆವರಣಕ್ಕೆ ವಿಶೇಷ ಬಸ್ ಮೂಲಕವೇ ಆಗಮಿಸಿದರು. ಇವರೊಂದಿಗೆ ಸಚಿವ ಎಸ್ ಟಿ ಸೋಮಶೇಖರ್,ಸಚಿವ ಸಿ.ಟಿ.ರವಿ,ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ರಾಜವಂಶಸ್ಥ ಯದುವೀರ್ ಒಡೆಯರ್, ಮೇಯರ್ ತಸ್ನೀಂ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪಾಲ್ಗೊಂಡಿದ್ದರು.


ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಸಾಗಿದಂತ ಜಂಬೂ ಸವಾರಿಯ ಸರಳ ಮೆರವಣಿಗೆ, ಕೇವಲ 400 ಮೀಟರ್ ಅನ್ನು, 30 ರಿಂದ 40 ನಿಮಿಷಗಳಲ್ಲಿ ಸಾಗಿ, ಜಂಬೂ ಸವಾರಿ ಮುಕ್ತಾಯಗೊಂಡಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: