ದೇಶಪ್ರಮುಖ ಸುದ್ದಿ

ಹೆಣ್ಣು ಭ್ರೂಣ ಹತ್ಯೆಗೆ ಪರಿಣಾಮಕಾರಿ ತಡೆ : ಹರಿಯಾಣದಲ್ಲಿ 950ಕ್ಕೇರಿದ ಲಿಂಗಾನುಪಾತ

ಚಂಡಿಗಢ : ಹೆಣ್ಣು ಭ್ರೂಣ ಹತ್ಯೆಯ ಕಾರಣದಿಂದ ಲಿಂಗಾನುಪಾತ ವ್ಯತ್ಯಾಸಕ್ಕೆ ಕುಖ್ಯಾತವಾಗಿರುವ ಹರಿಯಾಣ ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಹೆಣ್ಣು ಶಿಶು ಜನನ ಪ್ರಮಾಣ 950 ಕ್ಕೆ ಏರಿದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್‍ ಖಟ್ಟರ್ ಅವರು ಮಾಹಿತಿ ನೀಡಿದ್ದಾರೆ.

ಇದೇ ಪ್ರಥಮ ಬಾರಿಗೆ ಹರಿಯಾಣದ ಹಲವು ಜಿಲ್ಲೆಗಳಲ್ಲಿ ಒಂದು ಸಾವಿರ ಗಂಡು ಶಿಶುಗಳಿಗೆ 950 ಹೆಣ್ಣು ಶಿಶುಗಳ ಜನನ ಪ್ರಮಾಣ ದಾಖಲಾಗಿದೆ. ಕಳೆದ ಮಾರ್ಚ್‍ ತಿಂಗಳ ದಾಖಲಾತಿ ಈ ಸಂಖ್ಯೆಯನ್ನು ದೃಢಪಡಿಸಿದ್ದು, ಕೈತಾಲ್, ರೊಹ್ಟಕ್‍, ಝಜ್ಜಾರ್‍, ಗುರುಗ್ರಾಮ್, ಭೈವಾನಿ, ಜಿಂದ್, ಫತೆಹಬಾದ್‍, ರೆವಾರಿ, ಅಂಬಾಲ, ಮೆವಾತ್, ಸೋನಾಪೇಟ್‍ ಮತ್ತು ಫರೀದಾಬಾದ್‍ ಜಿಲ್ಲೆಗಳಲ್ಲಿ ಕ್ರಮವಾಗಿ 864, 863, 893, 893, 893, 896, 898, 912, 913, 921, 926, 939 ಮತ್ತು 947 ಶಿಶುಗಳ ಜನನ ದಾಖಲಾಗಿದೆ.

ಹಾಗೂ ಕರ್ನಾಲ್, ಹಿಸಾರ್, ಯಮುನಾನಗರ್, ಸಿರ್ಸಾ, ಕುರುಕ್ಷೇತ್ರ, ಪಾಣಿಪತ್, ಪಲ್ವಾಲ್ ಮತ್ತು ನರ್ನೂಲ್ ಜಿಲ್ಲೆಗಳಲ್ಲಿ ಕ್ರಮವಾಗಿ 953, 972, 974, 976, 980, 993, 1,217 ಮತ್ತು 1,279 ಶಿಶುಗಳು ಜನಿಸಿದ ವರದಿಗಳು ದಾಖಲಾಗಿವೆ ಎಂದು ರಾಜ್ಯ ಸರ್ಕಾರದ ವರದಿ ತಿಳಿಸಿದೆ.

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ “ಬೇಟಿ ಬಚಾವೊ – ಬೇಟಿ ಪಢಾವೋ” ಯೋಜನೆಯನ್ನು ರಾಜ್ಯ ಸರ್ಕಾರವು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಕಾರಣ ರಾಜ್ಯದಲ್ಲಿ ಹೆಣ್ಣು ಶಿಶುಗಳ ಜನನ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದ್ದಾರೆ.

ಮಾತ್ರವಲ್ಲದೆ, 1994 ಮತ್ತು 1971ರಲ್ಲಿ ಜಾರಿಗೆ ತಂದಿರುವ ಹೆಣ್ಣುಭ್ರೂಣ ಹತ್ಯೆ ತಡೆ ಕಾಯ್ದೆಯಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಕಳೆದ ಎರಡು ವರ್ಷಗಳಲ್ಲಿ 430 ಎಫ್‍ಐಆರ್ ದಾಖಲಿಸಲಾಗಿದೆ.

ಹರಿಯಾಣ ರಾಜ್ಯ ವ್ಯಾಪ್ತಿ ಮೀರಿ ನೆರೆ ರಾಜ್ಯಗಳಾದ ಉತ್ತರ ಪ್ರದೇಶ, ರಾಜಸ್ತಾನ, ದೆಹಲಿ, ಪಂಜಾಬ್‍ಗಳಿಗೆ ತೆರಳಿ ಭ್ರೂಣ ಹತ್ಯೆ ಮಾಡಲು ಪ್ರಯತ್ನಪಟ್ಟವರ ವಿರುದ್ಧವೂ 80 ಅಂತಾರಾಜ್ಯ ಪ್ರಕರಣಗಳನ್ನು ದಾಖಲಿಸಲಾಗಿದೆ.

ಜೊತೆಗೆ ಹೆಣ್ಣು ಭ್ರೂಣ ಹತ್ಯೆಯ ಬಗೆಗಿನ ಮೂಢನಂಬಿಕೆಗಳನ್ನು ಹೋಗಲಾಡಿಸಿಸುವ ಕುರಿತು ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕಾರಣ ಲಿಂಗಾನುಪಾದಲ್ಲಿ ಏರಿಕೆಯಾಗಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ನೀಡಿರುವ ಮಾಹಿತಿಯನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಮನೋಹರ ಲಾಲ್‍ ಖಟ್ಟರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

(ಎನ್‍.ಬಿ.ಎನ್‍)

Leave a Reply

comments

Related Articles

error: