ಮೈಸೂರು

ಮಹಿಳೆಯರ ಪ್ರಗತಿಗೆ ಸಮಾಜ ಹಾಗೂ ಸರ್ಕಾರದ ಬೆಂಬಲ ಅವಶ್ಯ : ಡಾ.ಸರ್ವಮಂಗಳಾ ಶಂಕರ್ ಆಶಯ

ವರದಕ್ಷಿಣೆ ಕಿರುಕುಳ, ಹೆಣ್ಣು ಭ್ರೂಣ ಹತ್ಯೆ, ಶೋಷಣೆ, ದೌರ್ಜನ್ಯಗಳನ್ನೆಲ್ಲ ಮೆಟ್ಟಿನಿಂತು ಪ್ರಗತಿಪಥದತ್ತ ಮಹಿಳೆ ಸಾಗುತ್ತಿದ್ದಾಳೆ . ಈ ನಿಟ್ಟಿನಲ್ಲಿ  ಸರ್ಕಾರ ಹಾಗೂ ಸಮಾಜ ಮಹಿಳೆಗೆ ಬೆಂಬಲ ನೀಡಬೇಕೆಂದು ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಕುಲಪತಿ ಡಾ.ಸರ್ವಮಂಗಳಾ ಶಂಕರ್‍ ಆಶಿಸಿದರು.

ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಕರ್ನಾಟಕ ರಾಜ್ಯ ಸರ್ವಜನಾಂಗ ಹಿತರಕ್ಷಣಾ ವೇದಿಕೆಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸರ್ಕಾರ ನೀಡಿರುವ ಮೀಸಲಾತಿಯನ್ನು ಸದುಪಯೋಗಪಡಿಸಿಕೊಳ್ಳಲು ಮಹಿಳೆಯರು ಇಂದಿಗೂ ವಿಫಲರಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಅವರುಗಳು ವಿದ್ಯಾವಂತರಾಗಿ ಸಶಕ್ತರಾಗಿ ಸಮಾಜದ ಎಲ್ಲಾ ಸ್ತರಗಳಲ್ಲಿಯೂ ಬೆಳೆಯಬೇಕೆಂದರು. ಕುಟುಂಬ ವ್ಯವಸ್ಥೆಯಲ್ಲಿ ಒಂದೇ ಮನೆಯಲ್ಲಿ ಮಗಳನ್ನು ಹಾಗೂ ಸೊಸೆಯನ್ನು ಬೇರೆ ಬೇರೆ ದೃಷ್ಟಿಯಿಂದ ನೋಡುತ್ತಿರುವುದು ಅಕ್ಷಮ್ಯ, ಇಂತಹ ನಕಾರಾತ್ಮಕ ಗುಣಗಳಿಗೆ ಕಡಿವಾಣ ಹಾಕಬೇಕು. ಜೀವನ ಚಕ್ರದಲ್ಲಿ ಹೆಣ್ಣು-ಗಂಡು ಸಮಾನರು, ಅವರವರ ಕರ್ತವ್ಯ ಹಾಗೂ ವಾಸ್ತವತೆಯನ್ನು ಅರಿತು ಸೌಹಾರ್ದಯುತವಾಗಿ ನಡೆಯಬೇಕೆಂದು ಕೋರಿದ ಅವರು ಸಮಾಜದಲ್ಲಿ ಇಂದಿಗೂ ಹಿಂದುಳಿದ ವರ್ಗಗಳನ್ನು ತುಳಿಯುವ ವ್ಯವಸ್ಥೆಯು ಸುವ್ಯವಸ್ಥಿತವಾಗಿ ನಡೆಯುತ್ತಿರುವುದು ಖೇಧಕರವೆಂದರು.

ವೇದಿಕೆ ಅಧ್ಯಕ್ಷ ವೇಣುಗೋಪಾಲ ಮಾತನಾಡಿ  ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ  ನೀಡಬೇಕೆಂಬುದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಆಶಯವಾಗಿತ್ತು.  ಸ್ವಾತಂತ್ರ್ಯ ಬಂದು 70 ವರ್ಷಗಳು ಸಂದರೂ ಅವರಾಸೆ  ಈಡೇರಿಲ್ಲ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಮಹಿಳೆಯರು ಮುಂದೆ ಬಂದು ಆದರ್ಶ ಶಕ್ತಿಯಾಗಿ ಬೆಳೆಯಬೇಕೆಂದು ತಿಳಿಸಿದರು.

ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತೆ, ರಾಜ್ಯ ವಕ್ಫ್ ಬೋರ್ಡ್ ಸದಸ್ಯೆ ಸಲ್ಮಾ ಸಿದ್ಧಿಕಿ ‘ಸಿಟಿಟುಡೆ’ಯೊಂದಿಗೆ ಮಾತನಾಡಿ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಸಣ್ಣ ಪ್ರಮಾಣದ ಬಡ್ಡಿ ರಹಿತ ಸಾಲ ನೀಡಿ ಸ್ವಯಂ ಉದ್ಯೋಗಕ್ಕೆ ಪ್ರೇರೇಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಹಲವಾರು ಯೋಜನೆಗಳಿವೆ. ಅವುಗಳು ಬಗ್ಗೆ ಸೂಕ್ತ ಮಾಹಿತಿ ಹಾಗೂ ಪ್ರಚಾರದ ಕೊರತೆಯಿದ್ದು ಸರಿಯಾಗಿ ಫಲಾನುಭವಿಗಳನ್ನು ತಲುಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಾಥಮಿಕವಾಗಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಯಾದರೆ ಮಾತ್ರ ಸಮಾಜದ ಏಳ್ಗೆ  ಸಾಧ್ಯ ಎಂದರು.

ರಾಜಕೀಯ, ಸಮಾಜಸೇವೆ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮೈಸೂರು, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳ ಸಾಧಕ ಮಹಿಳೆಯರಾದ ವಿಜಯಲಕ್ಷ್ಮೀ ( ಸರೋಜಿನಿ ನಾಯ್ಡು ), ಪದ್ಮ (ಸಾವಿತ್ರಿಬಾಯಿ ಫುಲೆ) , ಮಹದೇವಮ್ಮ (ಮದರ್ ತೆರೇಸಾ) ಚಿಕ್ಕ ತಾಯಮ್ಮ (ಒನಕೆ ಓಬವ್ವ), ಬಿ.ಟಿ.ರಾಜಮ್ಮ (ಅಕ್ಕಮಹಾದೇವಿ) ಹಾಗೂ ಹಸೀನ್‍ತಾಜ್ (ಇಂದಿರಾಗಾಂಧಿ) ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಕರ್ನಾಟಕ ಸಂಸ್ಕೃತ ವಿವಿಯ ಕುಲಪತಿ ಡಾ.ಪದ್ಮಶೇಖರ್, ನಾಗಮಂಗಲ ಬಿ.ಜಿ.ಎಸ್.ಅಪೋಲೋ ಆಸ್ಪತ್ರೆಯ ಡಾ.ಶಿವಕುಮಾರ್, ಮೃಗಾಲಯ ಪ್ರಾಧಿಕಾರ ಅಧ್ಯಕ್ಷೆ  ಮಲ್ಲಿಗೆ ವೀರೇಶ್, ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಮಡ್ಡಿಗೇರಿ ಗೋಪಾಲಗೌಡ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಂ.ಆರ್-ಎಸ್.ಎಚ್)

Leave a Reply

comments

Related Articles

error: