ಮೈಸೂರು

ಬದುಕನ್ನು ಆಸ್ವಾದಿಸಬೇಕಾದರೆ ಸಂಭ್ರಮದ ಬೇರುಗಳನ್ನು ಉಳಿಸಿಕೊಳ್ಳಬೇಕು : ಡಾ.ಮಲ್ಲೇಶ್ ಗೌಡ

ನಮ್ಮ ಪೂರ್ವಜರು ಪ್ರತಿಯೊಂದು ಚಿಕ್ಕ ಚಿಕ್ಕ ಸಂಗತಿಗಳನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದರು. ಆದರೆ ಇಂದು ಸಮೃದ್ಧಿ ಇದ್ದರೂ ಸಂಭ್ರಮ ಇಲ್ಲದಂತಾಗಿದೆ ಎಂದು ಹಾಸನದ ಎ.ವಿ.ಕೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಮಲ್ಲೇಶ್ ಗೌಡ ವಿಷಾದ ವ್ಯಕ್ತಪಡಿಸಿದರು.

ಮಹಾರಾಜ ಕಾಲೇಜು ಕನ್ನಡ ವಿಭಾಗ, ಕನ್ನಡ ಸಂಘ ಮತ್ತು ಪಠ್ಯೇತರ ಚಟುವಟಿಕೆ ಸಮಿತಿಗಳ ಸಹಯೋಗದಲ್ಲಿ ಶನಿವಾರ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ಜನಪದ ಜಾತ್ರೆ’, ‘ಪಾರಂಪರಿಕ ದಿನಾಚರಣೆ’ ಹಾಗೂ ‘ತುಂಬಿ ಹರಿದಾಳು ಗಂಗಿ’ ಕೃತಿ ಲೋಕಾರ್ಪಣೆ ಸಮಾರಂಭವನ್ನು ಉದ‍್ಘಾಟಿಸಿ ಅವರು ಮಾತನಾಡಿದರು.

ನಾವು ಇತ್ತೀಚಿನ ದಿನಗಳಲ್ಲಿ ನಮ್ಮ ಜನಪದದಲ್ಲಿರುವ ಅಮೂಲ್ಯ ಅಂಶಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಯಾತನೆ ನನಗೆ ಕಾಡುತ್ತಿದೆ. ಅನೇಕ ಸಂಗತಿಗಳು ನಮ್ಮಿಂದ ಕಣ್ಮರೆಯಾಗುತ್ತಿವೆ. ಅಂತಹ ಅಂಶಗಳನ್ನು ಮತ್ತೆ ಕಣ್ತುಂಬಿಕೊಳ್ಳುವುದು ಉತ್ಕೃಷ್ಠವಾದ ಕೆಲಸ. ಅಂತಹ ಮಹತ್ಕಾರ್ಯ ಇಂದು ಸಾಂಸ್ಕೃತಿಕ ನಗರಿಯ ಮಹಾರಾಜ ಕಾಲೇಜಿನಲ್ಲಿ ನಡೆಯುತ್ತಿರುವುದು ನಿಜಕ್ಕೂ ಸಂತಸದ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.

ಹಿಂದಿನ ಕಾಲದಲ್ಲಿ ನಮ್ಮ ಜನಪದರು ಏನಿಲ್ಲದಿದ್ದರೂ ಸಂಭ್ರಮ ಪಡುತ್ತಿದ್ದರು. ನಮ್ಮ ಪೂರ್ವಿಕರಿಗೆ ಇದ್ದುದ್ದರಲ್ಲಿ ಸುಖ ಪಡುವ ಮನೋಭಾವವಿತ್ತು. ಪ್ರತಿಯೊಂದು ಚಿಕ್ಕ ಚಿಕ್ಕ ಸಂದರ್ಭಗಳನ್ನು ಹಬ್ಬವಾಗಿ ಆಚರಿಸುತ್ತಿದ್ದರು. ಆದರೆ ಇಂದು ಸಮೃದ್ಧತೆ ಇದೆ. ಸುಖ ಇಲ್ಲ, ಸಂಭ್ರಮಿಸುವ ಗುಣ ಕಣ್ಮರೆಯಾಗಿದೆ. ಹೃದಯವಂತಿಕೆ ಇಲ್ಲದಂತಾಗಿದೆ. ಬದುಕನ್ನು ಆಸ್ವಾದಿಸಬೇಕಾದರೆ ಸಂಭ್ರಮದ ಬೇರುಗಳನ್ನು ಉಳಿಸಿಕೊಳ್ಳಬೇಕು. ಪ್ರಪಂಚಕ್ಕೆ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮತ್ತು ಸರಳ ಮಾರ್ಗಗಳನ್ನು ನೀಡಿದ್ದು ನಮ್ಮ ಜಾನಪದ. ಆದ್ದರಿಂದ ಜಾನಪದವನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕು ಎಂದು ಹೇಳಿದರು.

ಕೃತಿ ಕುರಿತು ಮಾತನಾಡಿದ ಸಹ ಪ್ರಾಧ್ಯಾಪಕ ಡಾ.ಕೆ.ತಿಮ್ಮಯ್ಯ, ‘ತುಂಬಿ ಹರಿದಾಳು ಗಂಗಿ’ ಕೃತಿಯಲ್ಲಿರುವ ಚಲನಶೀಲತೆ ಮತ್ತು ಕ್ರಿಯಾಶೀಲತೆ ಎಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿ ಲೇಖಕರಿಗೆ ಅಭಿನಂದನೆಗಳನ್ನುಸಲ್ಲಿಸಿದರು. ಹದಿನೆಂಟು ನಾರಿಮಣಿಯರು ಕೆರೆಗೆ ಹಾರವಾದ ನಿದರ್ಶನಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ನಾಡಿನ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಹಳ ಅರ್ಥಪೂರ್ಣವಾಗಿ, ಔಚಿತ್ಯವಾಗಿ ಹೇಳಿದ್ದಾರೆ. ಬೇರೆ ಬೇರೆ ಕೃತಿಗಳಲ್ಲಿ ಚದುರಿಹೋಗಿದ್ದ ಕೆರೆಗೆ ಹಾರ ನಿದರ್ಶನಗಳನ್ನು ಸಂಗ್ರಹಿಸುವ ಮಹತ್ವದ ಕೆಲಸ ಮಾಡಿದ್ದಾರೆ. ಇಲ್ಲಿ ಬರುವ ಕಥನ ಗೀತೆಗಳಲ್ಲಿ ನೀರಿಗೆ ಬಲಿಯಾಗುವ ಹೆಣ್ಣಿನ ತ್ಯಾಗ ಮನೋಭಾವವನ್ನು ಕಾಣಬಹುದಾಗಿದೆ. ನಮ್ಮ ಜಾನಪದ ಮತ್ತು ಗ್ರಾಮೀಣ ಸಂಸ್ಕೃತಿಯಲ್ಲಿ ಯಾವುದೇ ಶುಭ ಕಾರ್ಯ ಮಾಡುವ ಮುನ್ನ ನೀರಿಗೆ ಪೂಜೆ ಸಲ್ಲಿಸುವ ವಿಭಿನ್ನ ಸಂಪ್ರದಾಯವನ್ನು ಇಲ್ಲಿ ತಿಳಿಯಬಹುದಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಡಾ.ಕೆ.ಸೌಭಾಗ್ಯವತಿ ಬರೆದಿರುವ ‘ತುಂಬಿ ಹರಿದಾಳು ಗಂಗಿ’ ಕೃತಿಯನ್ನುಲೋಕಾರ್ಪಣೆ ಮಾಡಲಾಯಿತು. ಪಠ್ಯಪುಸ್ತಕ ವಿಶೇಷಾಂಕ ‘ತಳಿರು’ ಮಾಸ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಡಾ.ಎಲ್.ಲಿಂಬ್ಯಾನಾಯಕ್, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ವಿಜಯಲಕ್ಷ್ಮಿ ಡಿ, ಪಠ್ಯೇತರ ಚಟುವಟಿಕೆಗಳ ಸಮಿತಿಯ ಸಂಚಾಲಕ ಡಾ.ಎಸ್.ಟಿ.ರಾಮಚಂದ್ರ, ಕೃತಿಯ ಲೇಖಕಿ ಡಾ.ಕೆ.ಸೌಭಾಗ್ಯವತಿ ಉಪಸ‍್ಥಿತರಿದ್ದರು. (ಎಲ್.ಜಿ-ಎಸ್.ಎಚ್)

 

Leave a Reply

comments

Related Articles

error: