ಮೈಸೂರು

ಮಾನವೀಯ ಮೌಲ್ಯಗಳ ಪಾಲನೆ ಇಂದಿನ ಅವಶ್ಯಕತೆಯಾಗಿದೆ : ಇಳೈ ಆಳ್ವಾರ್ ಸ್ವಾಮೀಜಿ

ವಿಶಿಷ್ಟ ರೀತಿಯಲ್ಲಿ ಈದ್ ಮಿಲಾದ್ ಆಚರಣೆ

ಮೈಸೂರು,ಅ.30:- ಕೃಷ್ಣರಾಜ ಸ್ನೇಹ ಬಳಗ ವತಿಯಿಂದ ಈದ್ ಮಿಲಾದ್ ಅಂಗವಾಗಿ ಹಿಂದೂ ಮುಸ್ಲಿಂ ಬಂಧುಗಳು ಜತೆಗೂಡಿ ಸಸಿ ನೆಡುವ ಮೂಲಕ ಸಹಬಾಳ್ವೆ ಕಾರ್ಯಕ್ರಮ ವನ್ನು ಕುವೆಂಪು ನಗರದಲ್ಲಿರುವ ಸೌಗಂಧಿಕ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕರಾದ ಎನ್ ಎಂ ನವೀನ್ ಕುಮಾರ್ ಮಹಾಮಾರಿ ಕೊರೋನಾ ಸಂದರ್ಭದಲ್ಲಿ ದೇಶವೇ ಲಾಕ್ ಡೌನ್ ಆದಾಗ ನಿರ್ಗತಿಕರಿಗೆ ಹಿಂದು ಮತ್ತು ಮುಸಲ್ಮಾನ್ ಬಾಂಧವರು ಜತೆಗೂಡಿ ಅಸಹಾಯಕರಿಗೆ ಆಹಾರ ಮತ್ತು ದಿನನಿತ್ಯದ ಪದಾರ್ಥಗಳನ್ನು ನೀಡುವ ಮೂಲಕ ಸಹಬಾಳ್ವೆಯಿಂದ ಸಹಾಯ ಹಸ್ತ ನೀಡಿದ್ದಾರೆ. ಈ ಮಹಾಮಾರಿ ಕೊರೋನಾಗೆ ಜಾತಿ, ಧರ್ಮ, ಹಿರಿಯರು, ಕಿರಿಯರು, ಶ್ರೀಮಂತ, ಬಡವ ಎಂಬ ಬೇಧಭಾವವಿಲ್ಲದೆ ಎಲ್ಲರೂ ಈ ಮಹಾಮಾರಿ ರೋಗಕ್ಕೆ ತುತ್ತಾಗಿದ್ದಾರೆ. ಸಾರ್ವಜನಿಕರು ಆದಷ್ಟು ಪದೇ ಪದೆ ಕೈ ತೊಳೆಯುವುದು, ಮಾಸ್ಕ್ ಧರಿಸುವುದು, ಅಂತರ ಕಾಪಾಡುವಲ್ಲಿ ಮುಂದಾಗಬೇಕು ಎಂದರು. ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷದ ಎಲ್ಲಾ ಹಬ್ಬವನ್ನು ಸರಳವಾಗಿ ಆಚರಿಸೋಣ ಹಾಗೆಯೇ ಅಸಹಾಯಕರಿಗೆ ಸಹಾಯ ಮಾಡುವ ಮೂಲಕ ಈ ಬಾರಿಯ ಹಬ್ಬವನ್ನು ಆಚರಿಸೋಣ. ಈದ್-ಮಿಲಾದ್ ಹಬ್ಬ ನಮ್ಮ ಮುಸಲ್ಮಾನ್ ಸಮಾಜಕ್ಕೆ ಅಷ್ಟೇ ಮೀಸಲು ಇಲ್ಲ. ಈ ಹಬ್ಬವು ಹಿಂದೂ ಮುಸ್ಲಿಂರ ಭಾವೈಕ್ಯತೆಯ ಹಬ್ಬವಾಗಿರುವುದರಿಂದ ಎಲ್ಲರೂ ಸಹೋದರತೆಯಿಂದ ಆಚರಣೆ ಮಾಡುತ್ತಿದ್ದು, ಸರಕಾರದ ನಿಯಮಗಳು ಅನುಸರಿಸಿಕೊಂಡು ಹಬ್ಬವನ್ನು ಸರಳವಾಗಿ ಆಚರಿಸೋಣ ಎಂದು ಹೇಳಿದರು.
ಇಳೈ ಆಳ್ವಾರ್ ಸ್ವಾಮೀಜಿ ಮಾತನಾಡಿ ಸಹಬಾಳ್ವೆ ಎಲ್ಲ ಧರ್ಮಗಳ ತಿರುಳು. ಶಾಂತಿ, ಸಹಬಾಳ್ವೆ ಎಲ್ಲ ಧರ್ಮಗಳ ತಿರುಳಾಗಿದೆ. ಮಾನವೀಯ ಮೌಲ್ಯಗಳ ಪಾಲನೆ ಇಂದಿನ ಅವಶ್ಯಕತೆಯಾಗಿದೆ. ಮನುಕುಲದ ಉದ್ಧಾರಕ್ಕಾಗಿಯೇ ಮಹಾನ್ ವ್ಯಕ್ತಿಗಳು ಜನ್ಮ ತಾಳಿದ್ದಾರೆ. ಸಮಾಜವು ದಾರಿ ತಪ್ಪಿದಾಗ ಜನ್ಮ ತಾಳಿದ ಮಹಾ ಪುರುಷರು ಸರಿ ದಾರಿಗೆ ತರುವ ಯತ್ನ ನಡೆಸಿ ಬಹುತೇಕ ಯಶಸ್ವಿ ಆಗಿದ್ದಾರೆ. ಆದರೆ ಇಂದು ಅವರನ್ನು ಜಾತಿ, ಧರ್ಮಗಳೊಳಗೆ ಕಟ್ಟಿ ಹಾಕುತ್ತಿದ್ದೇವೆ’ ಎಂದು ಹೇಳಿದರು.
‘ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯುವ ಸದ್ಗುಣ ಮಾತ್ರ ಸಮಾಜದಲ್ಲಿ ಸಾಮರಸ್ಯ ಮೂಡಿಸಬಹುದು. ಇಡೀ ಮಾನವ ಕುಲದ ಅಭ್ಯುದಯಕ್ಕಾಗಿ ಶ್ರಮಿಸಿದ ಮಹ್ಮದ್ ಪೈಗಂಬರರು ಜಗತ್ತಿಗೆ ಶಾಂತಿಯ ಪಾಠ ಬೋಧಿಸಿದರು. ಮನುಷ್ಯ ಸಂಕುಚಿತ ಭಾವನೆ ತೊರೆದು ವಿಶಾಲ ಮನಸ್ಥಿತಿ ಬೆಳೆಸಿಕೊಳ್ಳಬೇಕು. ನಮಗೆ ಧರ್ಮ ಸಂಘರ್ಷ, ಹಿಂಸೆಗಳು ಬೇಕಾಗಿಲ್ಲ. ಪರಸ್ಪರ ಪ್ರೀತಿಯಿಂದ, ಮನುಷ್ಯತ್ವದಿಂದ ಬದುಕುವುದನ್ನು ಕಲಿಯೋಣ’ ಎಂದು ಕರೆ ನೀಡಿದರು.
‘ಧಾರ್ಮಿಕ ಉತ್ಸವಗಳು ಆಯಾ ಧರ್ಮಗಳಿಗೆ ಸೀಮಿತವಾದರೆ ಸಮಾಜದಲ್ಲಿ ಸಾಮರಸ್ಯ ಬರಲು ಸಾಧ್ಯವಿಲ್ಲ. ನಾವೆಲ್ಲರೂ ಒಂದೇ ಎಂಬ ಕಲ್ಪನೆ ಬೆಳೆಸಿಕೊಂಡು ಅನ್ಯೋನ್ಯವಾಗಿ ಬಾಳಿದಾಗ ಬದುಕು ಸಾರ್ಥಕವಾಗುತ್ತದೆ. ಮಹ್ಮದ್ ಪೈಗಂಬರರ ಬದುಕಿನ ಆದರ್ಶಗಳನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು. ಇಸ್ಲಾಂ, ಹಿಂದೂ, ಕ್ರಿಶ್ಚಿಯನ್ ಸೇರಿದಂತೆ ವಿವಿಧ ಧರ್ಮಗಳ ಮೂಲ ಗುರಿ ಮಾನವನ ಕಲ್ಯಾಣವೇ ಆಗಿದೆ ಎಂದರು.
ಈ ಸಂದರ್ಭ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ , ಅಶೋಕಪುರಂ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೆಬಲ್ ರಾಜೇಶ್,ಸಿದ್ದರಾಜು, ಮುಸಲ್ಮಾನ್ ಮುಖಂಡರಾದ ಸಾದಿಕ್ ರಹಮಾನ್ ,ಮೊಹಮ್ಮದ್ ಹ್ಯಾರಿಸ್ ,ಸೈಯದ್ ಅಬ್ಬಾಸ್ ,ರಫೀಕ ಆಲಿ ,ರಫೀಕ್ ,ಹುಸೇನ್ ,ಸಾದಿಕ್ ,ಎಂ ರಾಜೇಶ್ ,ಎಂಎಚ್ ಕಿರಣ್ ,ಸುನೀಲ್ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: