ಪ್ರಮುಖ ಸುದ್ದಿ

ದೀಪಾವಳಿಗೆ ಮುನ್ನ 25,000 ಟನ್ ಈರುಳ್ಳಿ ದೇಶೀ ಮಾರುಕಟ್ಟೆಗೆ ಆಗಮಿಸಲಿದೆ : ಸಚಿವ ಪೀಯೂಷ್ ಗೋಯಲ್

ದೇಶ( ನವದೆಹಲಿ)ಅ.31:- ದೀಪಾವಳಿಗೆ ಮುನ್ನ ಇನ್ನೂ 25,000 ಟನ್ ಈರುಳ್ಳಿ ದೇಶೀ ಮಾರುಕಟ್ಟೆಗೆ ಆಗಮಿಸಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಕೋ ಆಪರೇಟಿವ್ ನಾಫೆಡ್ ಸಹ ಈರುಳ್ಳಿ ಆಮದು ಪ್ರಾರಂಭಿಸಲಿದೆ ಎಂದಿರುವ ಅವರು ಪ್ರಮುಖ ಸರಕುಗಳ ಸ್ಥಳೀಯ ಪೂರೈಕೆ ಮತ್ತು ಬೆಲೆ ನಿಯಂತ್ರಣಕ್ಕಾಗಿ ಭೂತಾನ್‌ನಿಂದ 30,000 ಟನ್ ಆಲೂಗಡ್ಡೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಚಿಲ್ಲರೆ ಈರುಳ್ಳಿ ಬೆಲೆ ಕಳೆದ ಮೂರು ದಿನಗಳಲ್ಲಿ ಪ್ರತಿ ಕೆ.ಜಿ.ಗೆ 65 ರೂ. ನಲ್ಲಿ ಸ್ಥಿರವಾಗಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದೆ. ರಫ್ತುಗಳನ್ನು ಸಕಾಲಿಕವಾಗಿ ನಿಷೇಧಿಸಲಾಗಿದೆ. ಆಮದು ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೋಯಲ್ ಡಿಜಿಟಲ್ ಹೇಳಿದ್ದಾರೆ. ಡಿಸೆಂಬರ್ ವರೆಗೆ ಈರುಳ್ಳಿ ಆಮದು ಮಾಡಿಕೊಳ್ಳಲು ಸರ್ಕಾರವು ನಿಯಮಗಳನ್ನು ಸಡಿಲಿಕೆ ಮಾಡಿದೆ.ಈವರೆಗೆ 7,000 ಟನ್ ಈರುಳ್ಳಿಯನ್ನು ಖಾಸಗಿ ವ್ಯಾಪಾರಿಗಳು ಆಮದು ಮಾಡಿಕೊಂಡಿದ್ದಾರೆ.
ದೀಪಾವಳಿಯ ಮೊದಲು ಇನ್ನೂ 25 ಸಾವಿರ ಟನ್ ಈರುಳ್ಳಿ ಬರುವ ನಿರೀಕ್ಷೆಯಿದೆ. ಆಮದುಗಳ ಜೊತೆಗೆ ಮುಂದಿನ ತಿಂಗಳಿನಿಂದ ಮಂಡಿಗಳಲ್ಲಿ ಹೊಸ ಖಾರಿಫ್ ಬೆಳೆ ಆಗಮನವು ಪೂರೈಕೆ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಬೆಲೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ.
ಈಜಿಪ್ಟ್, ಅಫ್ಘಾನಿಸ್ತಾನ ಮತ್ತು ಟರ್ಕಿಯಂತಹ ದೇಶಗಳಿಂದ ಈರುಳ್ಳಿಯನ್ನು ಖಾಸಗಿ ವ್ಯಾಪಾರಿಗಳು ಆಮದು ಮಾಡಿಕೊಳ್ಳುತ್ತಿದ್ದಾರೆ. ಅಕ್ರಮ ದಾಸ್ತಾನು ಹಾಗೂ ಕಳ್ಳ ವ್ಯಾಪಾರ ತಡೆಯಲು ವ್ಯಾಪಾರಿಗಳಿಗೆ ಸಂಗ್ರಹದ ಮೇಲೆ ಮಿತಿ ವಿಧಿಸಲಾಗಿದೆ. ಸರ್ಕಾರದ ಪರವಾಗಿ ಈರುಳ್ಳಿ ಬಫರ್ ಸ್ಟಾಕ್ ಅನ್ನು ಹೊಂದಿರುವ ನಾಫೆಡ್ ಮುಕ್ತ ಮಾರುಕಟ್ಟೆಯಲ್ಲಿ ಸ್ಟಾಕ್ ಅನ್ನು ಲೋಡ್ ಮಾಡುತ್ತಿದೆ. ನಾಫೆಡ್ 36,488 ಟನ್ ಗಳಷ್ಟು ಈರುಳ್ಳಿಯನ್ನು ವಿತರಿಸಿದೆ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: