ಮೈಸೂರು

ಕವಿ ಸ್ಮರಣೆಯಲ್ಲಿ ಎಸ್.ಮಂಜುನಾಥ್ ಮತ್ತು ಜಂಬಣ್ಣ ಅಮರ ಚಿಂತರ ಬಣ್ಣನೆ

ಮಹಾರಾಣಿ ಮಹಿಳಾ ಕಲಾ ಕಾಲೇಜು ಕನ್ನಡ ವಿಭಾಗ ವತಿಯಿಂದ ಶನಿವಾರ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ  ಸಭಾಂಗಣದಲ್ಲಿ ಕವಿಗಳಾದ ಎಸ್.ಮಂಜುನಾಥ್ ಮತ್ತು ಜಂಬಣ್ಣ ಅಮರಚಿಂತ ಅವರ ಕವಿಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕವಿ ಜಿ.ಕೆ.ರವೀಂದ್ರಕುಮಾರ್ ಅವರು ಎಸ್. ಮಂಜುನಾಥ್ ಅವರ ಕಾವ್ಯ ಕುರಿತು ಮಾತನಾಡಿದರು. ಮಂಜುನಾಥ್ ಅವರು ಸದ್ಯದ ಸಂಗತಿಗಳ ಬಗ್ಗೆ ಹೆಚ್ಚಿನ ಕವಿತೆಗಳನ್ನು ಬರೆದಿದ್ದಾರೆ. ಶಾಶ್ವತತೆಗಿಂತ ವರ್ತಮಾನದ ಬದುಕು ಹೆಚ್ಚು ಮಹತ್ವಪೂರ್ಣವಾದುದು ಎಂದು ಭಾವಿಸಿದ್ದರು. ಸಣ್ಣ ಸಣ್ಣ ಸಂಗತಿಗಳಲ್ಲಿ ಹೆಚ್ಚು ಜೀವನದ ಅರ್ಥ ಮತ್ತು ಪ್ರೀತಿ ಇದೆ ಎಂದು ಶೋಧಿಸಿದ ಕವಿ ಮಂಜುನಾಥ್ ಎಂದು ಸ್ಮರಿಸಿದರು.

ತಮ್ಮ ಮನಸ್ಸನ್ನು ನಿಸರ್ಗದ ಜೊತೆ ಹರವಿಕೊಂಡಿದ್ದ ಪ್ರಕೃತಿ ಕವಿ ಮಂಜುನಾಥ್. ಶಾಶ್ವತತೆಯನ್ನು ಮೀರಿದ ಸತ್ಯದ ಹುಡುಕಾಟದ ಕವಿತೆಗಳನ್ನು ಅವರು ಬರೆದಿದ್ದಾರೆ. ವ್ಯಷ್ಠಿ ಮತ್ತು ಸಮಷ್ಠಿ ಎರಡೂ ಒಂದೇ ಎಂಬಂತೆ ಕಂಡವರು ಇವರು. ಪ್ರಸ್ತುತ ದಿನಗಳಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನರಾಗಿರುವ ಯುವಜನತೆ ಕದ ಹಾಕಿದ ಮನೆಯೊಳಗೆ ಕುಳಿತಂತೆ ಇದ್ದಾರೆ. ಆದರೆ ಮಂಜುನಾಥ್ ಅವರು ಸದಾ ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಹಾರಾಡುವ ಪಕ್ಷಿಯಂತೆ ವಿಹರಿಸಿದವರು ಎಂದು ಹೇಳಿದರು.

ಕವಿ ನಾಗಣ್ಣ ಕಿಲಾರಿ ಅವರು ಜಂಬಣ್ಣ ಅಮರಚಿಂತ ಅವರ ಕಾವ್ಯ ಕುರಿತಂತೆ ಮಾತನಾಡಿದರು. ಜಂಬಣ್ಣ ಅಮರಚಿಂತ ದಲಿತ ಬಂಡಾಯ ಕವಿ. ಸದಾ ನೊಂದವರ ನೋವು ಮತ್ತು ಹಸಿವಿನ ಬಗ್ಗೆ ಬರೆಯುತ್ತಿದ್ದರು. ನೊಂದ ಜನರಿಗಾಗಿ ಕಾವ್ಯ ಮತ್ತು ಬದುಕು ಇರಬೇಕೆಂಬುದು ಅವರ ಆಶಯವಾಗಿತ್ತು. ತನ್ನ ಸುಖಕ್ಕಾಗಿ ಇನ್ನೊಬ್ಬರಿಗೆ ನೋವು ಕೊಡಬಾರದೆಂಬ ಮನೋಭಾವ ಅವರದಾಗಿತ್ತು ಎಂದು ತಿಳಿಸಿದರು.

ಅವರ ‘ಪೆಟ್ರೋಮ್ಯಾಕ್ಸ್ ಹೊತ್ತವರು’ ಎಂಬ ಕವನ ಸಂಕಲನದಲ್ಲಿ ದಲಿತರು ದೀಪಗಳನ್ನು ಹೊತ್ತು ಸಾಗುತ್ತಾರೆ. ಆ ಬೆಳಕಿನಲ್ಲಿ ಶ್ರೀಮಂತರು ಬೆಳಗುತ್ತಾರೆ. ಬೆಳಗುವ ಶ್ರೀಮಂತರನ್ನು ಮಾತ್ರ ನೋಡದೆ ಬೆಳಕನ್ನು ಹೊತ್ತು ನಿಂತ ದಲಿತರ ಕಡೆಗೂ ನೋಡಬೇಕು ಎಂಬುದು ಅವರ ನಿಲುವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ‍್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಟಿ.ವಿಜಯ್ ವಹಿಸಿದ್ದರು. ಪ್ರಾಧ್ಯಾಪಕಿ ದೇವಮ್ಮಣ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಿ.ವಿ.ವಸಂತಕುಮಾರ್, ಪ್ರಾಧ್ಯಾಪಕ ನಂಜುಂಡಯ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  (ಎಲ್.ಜಿ-ಎಸ್.ಎಚ್)

 

Leave a Reply

comments

Related Articles

error: